ವಿಪಕ್ಷಗಳ ಅಪ್ರಚಾರಗಳಿಗೆ ಜನ ಮನ್ನಣೆ ನೀಡಿಲ್ಲ: ಪದ್ಮರಾಜ್ ಪೂಜಾರಿ
ಮಂಗಳೂರು: ದ.ಕ ಜಿಲ್ಲೆಯ ಗ್ರಾಮ ಪಂಚಾಯತ್‌ನ 24 ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 19 ಅಭ್ಯರ್ಥಿಗಳು ಹಾಗೂ ಬಂಟ್ವಾಳ ಪುರಸಭೆಯ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯ, ಜನಪರ ಕೆಲಸ ಹಾಗೂ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯನ್ನು ಜನತೆ ಒಪ್ಪಿಕೊಂಡಿದ್ದಾರೆ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿ ಗೋಚರಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ವಿಪಕ್ಷಗಳ ವಕ್ಫ್, ರೇಷನ್ ಕಾರ್ಡ್ ಗೊಂದಲ ಕುರಿತ ಅಪಪ್ರಚಾರಗಳಿಗೆ ಪ್ರಬುದ್ಧ ಮತದಾರರು ಯಾವುದೇ ಮನ್ನಣೆ ನೀಡಿಲ್ಲ ಎಂಬುದು ಸ್ಪಷ್ಟವಾಗಿದೆ. ಇದು ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪುನಶ್ಚೇತನ ಮತ್ತು ಮುಂಬರುವ ಎಲ್ಲ ಚುನಾ ವಣೆಗೆ ದಿಕ್ಸೂಚಿಯಾಗಲಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶ ಮತ್ತು ಈ ಫಲಿತಾಂಶ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೈಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಪದ್ಮರಾಜ್ ಆರ್. ಪೂಜಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.