ಅಕ್ರಮ-ಸಕ್ರಮ ಅರ್ಜಿ ಅಧಿಕಾರಿಗಳ ಹಂತದಲ್ಲಿ ತಿರಸ್ಕಾರ ಮಾಡಬಾರದು: ಗಂಟಿಹೊಳೆ
ಬೈಂದೂರು: ಅಕ್ರಮ- ಸಕ್ರಮ(ಬಗರ್ ಹುಕುಂ ) ಸಮಿತಿಯ ಅವಗಾಹನೆಗೆ ತಾರದೇ ಕಂದಾಯ ಇಲಾಖೆ ಅಧಿಕಾರಿಗಳು ಯಾವುದೇ ಅರ್ಜಿ ತಿರಸ್ಕರಿಸುವುದು ಅಥವಾ ವಿಲೇವಾರಿ ಮಾಡುವಂತಿಲ್ಲ. ಸಮಿತಿಯ ಮುಂದೆ ತಂದು ಅಕ್ರಮ-ಸಕ್ರಮಕ್ಕೆ ಸಮಿತಿಯ ಸೂಚನೆಯಂತೆ ನಿರ್ಧರಿಸ ಬೇಕು. ಅಧಿಕಾರಿಗಳು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಲ್ಲಿ ಬಹುದೊಡ್ಡ ಹೋರಾಟ ರೂಪಿಸಬೇಕಾಗುತ್ತದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಎಚ್ಚರಿಕೆ ನೀಡಿದ್ದಾರೆ.
ಕಾಡಿನಂಚಿನ ಗ್ರಾಮಗಳಲ್ಲಿ ಕಳೆದ ಅನೇಕ ವರ್ಷದಿಂದ ಸಾಗುವಳಿ ಮಾಡಿ ಕೊಂಡು ಬಂದಿರುವವರು ಹಕ್ಕುಪತ್ರಕ್ಕಾಗಿ ಅಕ್ರಮ-ಸಕ್ರಮದಡಿ ಅರ್ಜಿ ಸಲ್ಲಿಸಿರುತ್ತಾರೆ. ನಮೂನೆ 50, ನಮೂನೆ 53 ಹಾಗೂ ಇತ್ತೀಚೆಗೆ ನಮೂನೆ 57ರ ಅಡಿ ಅರ್ಜಿ ಸಲ್ಲಿಸಿದ್ದಾರೆ. ಮೂರು ನಮೂನೆಗಳಲ್ಲಿಯೂ ಅರ್ಜಿ ಸಲ್ಲಿಸಿರಬಹುದು ಅಥವಾ ಯಾವುದಾದರು ಒಂದು ನಮೂನೆಯಡಿ ಅರ್ಜಿ ಸಲ್ಲಿಕೆ ಆಗಿರಬಹುದು. ಎಲ್ಲವನ್ನು ಸಮಿತಿಯ ಮುಂದೆ ತಂದು ಪರಿಶೀಲಿಸಿ ಅಂತಿಮ ಪುರಸ್ಕಾರ ಅಥವಾ ತಿರಸ್ಕಾರ ಪ್ರಕ್ರಿಯೆ ನಡೆಯಬೇಕು. ಅಧಿಕಾರಿಗಳೇ ಏಕಾಏಕಿ ನಿರ್ಧಾರ ತೆಗೆದುಕೊಳ್ಳುವುದಾದರೆ ಸಮಿತಿಗಳನ್ನು ಸರಕಾರ ಯಾಕೆ ರಚನೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಹಲವು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಅಧಿಕಾರಿಗಳ ನಿರ್ಧಾರದಿಂದ ಕಂಗಾಲಾಗಿದ್ದಾರೆ. ಅರ್ಜಿ ತಿರಸ್ಕರಿಸುವಾಗ ಅಧಿಕಾರಿಗಳು ರೈತರ ಹೇಳಿಕೆಯನ್ನೂ ದಾಖಲಿಸಿಕೊಳ್ಳುತ್ತಿಲ್ಲ. ಇಂಥ ಏಕಪಕ್ಷೀಯ ನಡವಳಿಕೆ ತಕ್ಷಣ ನಿಲ್ಲಿಸಿ ರೈತರಿಗೆ ನ್ಯಾಯ ನೀಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.