ಕೃಷ್ಣ ಗೌಡ ಮಾದ್ಲಮನೆಗೆ ‘ಜನಪದ ವೈದ್ಯ ಸಿರಿ’ ಪ್ರಶಸ್ತಿ ಪ್ರದಾನ
ಉಡುಪಿ, ನ.29: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜಾನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ವತಿಯಿಂದ ರಾಜ್ಯಮಟ್ಟದ ಜನಪದ ವೈದ್ಯ ಸಿರಿ ಪ್ರಶಸ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಹಾರ್ಸಿಕಟ್ಟಾ ಅಂಚೆಯ ಜಾನಪದ ವೈದ್ಯ ಕೃಷ್ಣ ಗೌಡ ಮಾದ್ಲಮನೆ ಅವರಿಗೆ ಶುಕ್ರವಾರ ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಸ್ವೀಕರಿಸಿದ ಕೃಷ್ಣ ಗೌಡ, ಪಾರಂಪರಿಕ ಸಂಪ್ರದಾಯದಿಂದ ಬಂದ ಜಾನಪದ ಶೈಲಿಯ ವೈದ್ಯಕೀಯ ಶುಶ್ರೂಷೆಯ ಬಗ್ಗೆ ಮಾತನಾಡಿದರು. ಆಯುರ್ವೇದ ವಿದ್ಯಾರ್ಥಿಗಳಿಗೆ ಮುಂದಿನ ದಿನದಲ್ಲಿ ಆಯುರ್ವೇದಕ್ಕೆ ಹೆಚ್ಚಿನ ಬೇಡಿಕೆ ಬರುವುದ ರಿಂದ ಆಯುರ್ವೇದದಲ್ಲಿ ಅಪಾರ ನಂಬಿಕೆ ಇಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಾ.ಎಂ.ಆರ್.ವಾಸುದೇವನ್ ನಂಬೂದಿರಿ, ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ., ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್., ಆಡಳಿತ ವಿಭಾಗ ಮುಖ್ಯಸ್ಥ ಡಾ.ವೀರಕುಮಾರ ಕೆ., ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಡಾ.ಶ್ರೀಲತಾ ಕಾಮತ್, ಸ್ನಾತಕೋತ್ತರ ವಿಭಾಗದ ಡೀನ್ ಡಾ.ಅಶೋಕ್ ಕುಮಾರ್ ಬಿ.ಎನ್., ಸ್ನಾತಕ ವಿಭಾಗದ ಡೀನ್ ಡಾ. ರಜನೀಶ್ ವಿ.ಗಿರಿ ಉಪಸ್ಥಿತರಿದ್ದರು.
ಜನಪದ ವೈದ್ಯಕೀಯ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿಕೃಷ್ಣ ಎಸ್. ವೈದ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಸದಸ್ಯ ಡಾ.ರವಿ ಕೆ.ವಿ. ವೈದ್ಯರನ್ನು ಪರಿಚಯಿಸಿದರು. ಡಾ.ಸುಷ್ಮಿತಾ ವಿ.ಎಸ್. ಸನ್ಮಾನ ಪತ್ರ ವಾಚಿಸಿದರು.