ಫೆಂಗಲ್ ಚಂಡಮಾರುತದ ಪ್ರಭಾವ: ಕಾಪು, ಕಾರ್ಕಳದಲ್ಲಿ ಭಾರೀ ಮಳೆ
ಉಡುಪಿ: ಬಂಗಾಳಕೊಲ್ಲಿಯಲ್ಲಿ ಎದ್ದಿದ್ದ ಫಂಗಲ್ ಚಂಡಮಾರುತದ ಪರಿಣಾಮವಾಗಿ ಉಡುಪಿ ಜಿಲ್ಲೆಯ ಕಾಪು, ಕಾರ್ಕಳ ಹಾಗೂ ಉಡುಪಿ ತಾಲೂಕುಗಳಲ್ಲಿ ಭಾರೀ ಮಳೆ ಸುರಿದಿದೆ. ಮಂಗಳವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ, ಮಳೆ-ಚಳಿಗಾಲದ ವಾತಾವರಣ ದಿನವಿಡೀ ಕಂಡುಬಂದಿದೆ. ಮುಂಜಾನೆ 9ಗಂಟೆಯವರೆಗೆ ಕತ್ತಲಿನಂಥ ವಾತಾವರಣ ವಿದ್ದು, ವಾಹನಗಳು ಹೆಡ್ಲೈಟ್ ಹಾಕಿಕೊಂಡೇ ಸಂಚರಿಸುತಿದ್ದವು.
ಸೋಮವಾರ ಸಂಜೆಯ ಬಳಿಕ ಒಮ್ಮಿಂದೊಮ್ಮೆಗೆ ಬಿರುಸು ಪಡೆದ ಮಳೆ ರಾತ್ರಿಯಿಡೀ ಧಾರಾಕಾರವಾಗಿ ಸುರಿಯಿತು. ಹಲವು ಕಡೆಗಳಲ್ಲಿ ಮಳೆ ಯೊಂದಿಗೆ ಗುಡುಗು ಹಾಗೂ ಸಿಡಿಲಿನ ಅಬ್ಬರವೂ ಜೋರಾಗಿತ್ತು. ಇದರಿಂದ ಜಿಲ್ಲೆಯ ನಾನಾ ಕಡೆಗಳಲ್ಲಿ ಹಲವು ಮನೆಗಳಿಗೆ ಸಿಡಿಲು ಬಡಿದು ಅಪಾರ ಪ್ರಮಾಣದ ನಷ್ಟ ಸಂಭವಿಸಿರುವ ಬಗ್ಗೆ ವರದಿಗಳು ಬಂದಿವೆ.
ಜಿಲ್ಲೆಯ ಕಾಪು ಮತ್ತು ಕಾರ್ಕಳ ತಾಲೂಕುಗಳ ಹಲವು ಪ್ರದೇಶಗಳಲ್ಲಿ ಮಳೆಗಾಲದ ಮೂರು ತಿಂಗಳಲ್ಲೂ ಕಂಡುಬರದ ಮಳೆ ಸುರಿದಿದ್ದು, ಕೆಲವು ಕಡೆ 20 ಸೆ.ಮೀ.ಗಳಿಗೂ ಅಧಿಕ ಮಳೆ ಸುರಿದ ಬಗ್ಗೆ ಮಾಹಿತಿಗಳು ಬಂದಿವೆ. ಇಲ್ಲಿ ಸಿಕ್ಕಿರುವ ಮಾಹಿತಿಯಂತೆ ಕಾರ್ಕಳದ ನೀರೆಯಲ್ಲಿ ಅತ್ಯಧಿಕ 26 ಸೆ.ಮಿ. ಮಳೆಯಾಗಿದೆ. ಉಳಿದಂತೆ ಕಾಪು ತಾಲೂಕಿನ ಹೆಜಮಾಡಿ ಯಲ್ಲಿ 23, ತೆಂಕದಲ್ಲಿ 22, ಫಲಿಮಾರು ಮತ್ತು ಮುದರಂಗಡಿಗಳಲ್ಲಿ ತಲಾ 20, ಬೆಳಪು, ಪಡಬಿದ್ರಿಯಲ್ಲಿ 19 ಹಾಗೂ ಶಿರ್ವ, ಇನ್ನಾ, ನಿಟ್ಟೆ, ಮುಂತಾದ ಕಡೆ ತಲಾ 18ಸೆ.ಮೀ. ಮಳೆಯಾಗಿರುವುದಾಗಿ ಮಾಹಿತಿಯಲ್ಲಿ ತಿಳಿಸಲಾಗಿದೆ.
ಇಂದು ಬೆಳಗ್ಗೆ 8 ಗಂಟೆಗೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 60.2ಮಿ.ಮೀ. ಮಳೆಯಾಗಿದೆ. ಆದರೆ ಕಾಪುವಿನಲ್ಲಿ ಅತ್ಯಧಿಕ 169.5ಮಿ.ಮೀ. ಮಳೆಯಾದರೆ, ಕಾರ್ಕಳದಲ್ಲಿ 113.7ಮಿ.ಮೀ. ಬಿದ್ದಿದೆ. ಉಡುಪಿಯಲ್ಲಿ 108.4 ಮಿ.ಮೀ. ಮಳೆಯಾಗಿ ರುವ ಮಾಹಿತಿ ಜಿಲ್ಲಾಧಿಕಾರಿ ಕಚೇರಿ ವಿಕೋಪ ನಿರ್ವಹಣಾ ಕೇಂದ್ರದಿಂದ ಬಂದಿದೆ. ಇನ್ನುಳಿದಂತೆ ಬ್ರಹ್ಮಾವರದಲ್ಲಿ 64.0ಮಿ.ಮೀ, ಹೆಬ್ರಿಯಲ್ಲಿ 28.7ಮಿ.ಮೀ., ಕುಂದಾಪುರದಲ್ಲಿ 20.3 ಹಾಗೂ ಬೈಂದೂರಿನಲ್ಲಿ ಕನಿಷ್ಠ 7.8ಮಿ.ಮೀ. ಮಳೆಯಾಗಿರುವ ವರದಿಗಳು ಬಂದಿವೆ.
ಸೋಮವಾರದಿಂದ ಸುರಿದ ಮಳೆಯಿಂದಾಗಿ ಉಡುಪಿ ಸೇರಿದಂತೆ ನಗರದ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಜಿಲ್ಲೆಯ ಅನೇಕ ಕಡೆಗಳಲ್ಲಿ ನಿನ್ನೆಯಿಂದ ವಿದ್ಯುತ್ ಕಣ್ಣಮುಚ್ಚಾಲೆ ಯಾಡುತ್ತಿವೆ. ಹೆಚ್ಚಿನ ಕಡೆಗಳಲ್ಲಿ ಇಂದು ಮಧ್ಯಾಹ್ನದ ಬಳಿಕವಷ್ಟೇ ವಿದ್ಯುತ್ನ ದರ್ಶನವಾಗಿದೆ. ಇದರಿಂದ ಜನರು ತೀವ್ರ ಪರದಾಟ ನಡೆಸುವಂತಾಗಿದೆ.
ಸಿಡಿಲಿಗೆ ಮನೆ ಹಾನಿ, ಜಾನುವಾರು ಬಲಿ: ಇಂದು ಕಾಪು ತಾಲೂಕಿನ ಎಲ್ಲೂರು ಗ್ರಾಮದ ಶೇಖರ ಪೂಜಾರಿ ಎಂಬವರ ಜಾನುವಾರು ಸಿಡಿಲು ಬಡಿದು ಮೃತಪಟ್ಟಿದೆ ಎಂದು ಕಾಪು ತಹಶೀಲ್ದಾರ್ ತಿಳಿಸಿದ್ದಾರೆ.
ಸಿಡಿಲು ಬಡಿದು ಬ್ರಹ್ಮಾವರ ತಾಲೂಕು ನೀಲಾವರ ಗ್ರಾಮದ ಸೊಣಗಾರ ಬೆಟ್ಟು ಎಂಬಲ್ಲಿ ರಾಧು ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಆದರೆ ಮನೆಯವರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿ ದ್ದಾರೆ. ಆದರೆ ಮನೆಯ ವಿದ್ಯುತ್ ಉಪಕರಣಗಳೆಲ್ಲೂ ಸಿಡಿಲಿನಿಂದ ಸುಟ್ಟು ಕರಕಲಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ 40,000ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ.
ಇನ್ನು ಕಾಡೂರು ಗ್ರಾಮದ ರಾಮಚಂದ್ರ ಆಚಾರಿ ಎಂಬವರ ಮನೆಗೂ ಸಿಡಿಲು ಬಡಿದು ಅಪಾರ ಹಾನಿಯಾಗಿದ್ದು 75,000 ರೂ. ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ. ಪೆಜಮಂಗೂರು ಗ್ರಾಮದ ಭಾರತಿ ಎಂಬವರ ಮನೆಯೂ ಸಿಡಿಲು-ಗಾಳಿ ಮಳೆಯಿಂದ ಹಾನಿಗೊಂಡಿರುವ ಮಾಹಿತಿ ಬಂದಿದೆ.
ಚೌಕಿಗೆ ನುಗ್ಗಿದ ನೀರು: ಜಿಲ್ಲೆಯಲ್ಲಿ ಇದೀಗ ಯಕ್ಷಗಾನ ಮೇಳಗಳು ತಿರುಗಾಟಕ್ಕೆ ತೊಡಗಿದ್ದು, ನಿನ್ನೆ ಹೆಚ್ಚಿನೆಲ್ಲಾ ಮೇಳಗಳ ಬಯಲಾಟಗಳು ಮಳೆ-ಗಾಳಿ- ಗುಡುಗುಗಳ ಕಾರಣದಿಂದ ರದ್ದಾಗಿವೆ. ನಿನ್ನೆ ಸಂಜೆ ಮಂದಾರ್ತಿ ಮೇಳದ ಯಕ್ಷಗಾನ ಪ್ರದರ್ಶನಕ್ಕಾಗಿ ಕಲಾವಿದರ ಮೇಕಪ್ಗಾಗಿ ಹಾಕಿದ್ದ ಚೌಕಿ ಭಾರೀ ಮಳೆಯಿಂದ ಸಂಪೂರ್ಣ ಜಲಾವೃತಗೊಂಡ ವೀಡಿಯೋ ಒಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಲ್ಪೆಯ ಸಿಟಿ ಸೆಂಟರ್ ಬಿಲ್ಡಿಂಗ್ಗೆ ಮಳೆ ನೀರು ನುಗ್ಗಿದ್ದು ಅಂಗಡಿಗಳೆಲ್ಲಾ ಜಲಾವೃತ್ತಗೊಂಡಿವೆ. ಅಂಗಡಿಗಳಿಗೆ ಸಾಕಷ್ಟು ನಷ್ಟವಾಗಿರುವುದಾಗಿ ಹೇಳಲಾಗಿದೆ. ಮಲ್ಪೆಯಲ್ಲಿ ಬೀಚ್ನಲ್ಲಿ ವಿಹಾರಕ್ಕಾಗಿ ಬಂದ ಪ್ರವಾಸಿಗರಿಗೆ ನಿರಾಶೆ ಎದುರಾಗಿದೆ. ದೊಡ್ಡೆ ದೊಡ್ಡೆ ಅಲೆಗಳು ಹಾಗೂ ಬಾರೀ ಗಾಳಿ ಬೀಸುತ್ತಿರುವುದರಿಂದ ಯಾರನ್ನೂ ಬೀಚ್ನಲ್ಲಿ ಇರಲು ಬಿಡಲಿಲ್ಲ. ಹೀಗಾಗಿ ಸಮುದ್ರ ತೀರದಲ್ಲಿ ನೀರಾಟಕ್ಕೆಂದು ಬಂದವರು ನಿರಾಶೆಯಿಂದ ಹಿಂದೆ ಬರಬೇಕಾಯಿತು. ಅಲ್ಲದೇ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು.