ಕಳ್ತೂರು ಸಂತೆಕಟ್ಟೆಯಲ್ಲಿ ಕೊರಗ ಅಭಿವೃದ್ಧಿ ಸಂಘದಿಂದ ‘ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆ’
ಉಡುಪಿ, ಡಿ.4: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ- ಕೇರಳ ಮತ್ತು ಗೆಳೆಯರ ಬಳಗ ಕ್ರೀಡಾ ಸಂಘ ಕಳ್ತೂರು ಸಂತೆಕಟ್ಟೆ ಇವರ ಜಂಟಿ ಆಶ್ರಯದಲ್ಲಿ ವಿಶ್ವಮಾನವ ಹಕ್ಕುಗಳ ಪಕ್ಷಾಚರಣೆಯಂಗವಾಗಿ ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗೆ ಹಿಂಸೆ ದೌರ್ಜನ್ಯಗಳ ವಿರುದ್ಧ ಆಂದೋಲನ, ಪಂಜಿನ ಮೆರವಣಿಗೆ ಮಂಗಳವಾರ ಸಂಜೆ ಕಳ್ತೂರು ಸಂತೆಕಟ್ಟೆ ಸರ್ಕಲ್ನಲ್ಲಿ ನಡೆಯಿತು.
38ನೇ ಕಳ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ಪೂಜಾರಿ ಡೋಲು ಬಾರಿಸಿ ಪಂಜನ್ನು ಹೊತ್ತಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ಕಾರ್ಯಕ್ರಮದ ಉದ್ದೇಶವನ್ನು ಪ್ರಾಸ್ತಾವಿಕ ಮಾತುಗಳನ್ನು ವಿವರಿಸಿದರು
ಸಂತೆಕಟ್ಟೆ ಸರ್ಕಲ್ನಿಂದ ಪಂಜಿನ ಮೆರವಣಿಗೆ ಕಳ್ತೂರು ಗ್ರಾಪಂ ಅಧ್ಯಕ್ಷ ನವೀನ್ ಪೂಜಾರಿ, ಸದಸ್ಯರಾದ ಉಷಾ ಪೂಜಾರಿ, ನಾಗೇಶ್ ನಾಯ್ಕ, ಅಲ್ಲದೇ ರವಿ ಪೂಜಾರಿ, ಗಿರೀಶ್ ಕಾಮತ್ ಹಾಗೂ ಕೊರಗ ಸಮುದಾಯದ ಸಹಿತ ಕಳ್ತೂರಿಗೆ ಆಗಮಿಸಿತು. ಕಳ್ತೂರಿನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷ ನವೀನ್ ಪೂಜಾರಿ ಡೋಲು ಬಾರಿಸುವ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕಳ್ತೂರು ಸಂತೆಕಟ್ಟೆ ಗೆಳೆಯರ ಬಳಗ ಕ್ರೀಡಾ ಸಂಘದ ಅಧ್ಯಕ್ಷ ಚಂದ್ರ ಕಳ್ತೂರು, ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸೆ ದೌರ್ಜನ್ಯಗಳ ಕುರಿತು ಮಾಹಿತಿ ನೀಡಿದರು. ಈ ತರಹದ ಹಿಂಸೆ ದೌರ್ಜನ್ಯಗಳ ಕುರಿತು ನಮ್ಮ ಒಕ್ಕೂಟ ಹಲವಾರು ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು, ಸಾಕಷ್ಟು ಮಂದಿ ಕೊರಗ ಹೆಣ್ಣು ಮಕ್ಕಳು, ಮಹಿಳೆಯರು ಕಾರ್ಯಾಗಾರದಲ್ಲಿ ಭಾಗವಹಿಸಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಕುರಿತು ಅರಿತುಕೊಂಡಿದ್ದಾರೆ ಎಂದರು.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಅಮ್ಮಣ್ಣಿ ಅಬ್ಲಿಕಟ್ಟೆ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ಹಿಂಸೆ ದೌರ್ಜನ್ಯಗಳ ಕುರಿತು ವಿವರಿಸಿ ಅದನ್ನು ಯಾವ ರೀತಿ ಎದುರಿಸಬೇಕು ಎಂಬ ಕುರಿತು ಮಾಹಿತಿ ನೀಡಿದರು.
ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ಹಾಲಿ ಅಧ್ಯಕ್ಷೆ ಸುಶೀಲಾ ನಾಡ ವಿಶ್ವ ಮಾನವ ಹಕ್ಕುಗಳ ಕುರಿತು ಮತ್ತು ಸಂಘಟನೆಯ ಬಲವರ್ಧನೆಯ ಕುರಿತು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರಾದ ನಾಗೇಶ್ ನಾಯ್ಕ, ಉಷಾ ಪೂಜಾರಿ ಭಾಗವಹಿಸಿದ್ದರು.
ಗೆಳೆಯರ ಬಳಗ ಧ್ಯೇಯ ಗೀತೆಯನ್ನು ಹಾಡಿದರೆ, ಸುಶ್ಮಿತಾ ಕಳ್ತೂರು ಅತಿಥಿಗಳನ್ನು ಸ್ವಾಗತಿಸಿದರು. ಅಭಿಜಿತ್ ಕಳ್ತೂರು ವಂದಿಸಿ ವಿಮಲಾ ಕಳ್ತೂರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಹಭೋಜನವನ್ನು ಆಯೋಜಿಸಲಾಗಿತು.