ನೂತನ ಕಾರ್ಮಿಕ ಸಂಹಿತೆ ರಾಜ್ಯದಲ್ಲಿ ಜಾರಿ ಮಾಡಿದರೆ ಹೋರಾಟ: ಎಚ್.ನರಸಿಂಹ ಎಚ್ಚರಿಕೆ
ಬಜೆಟ್ ಪೂರ್ವ ಸಿಐಟಿಯು ಧರಣಿ
ಉಡುಪಿ: ರಾಜ್ಯ ಸರಕಾರ ಮಾರ್ಚ್ ತಿಂಗಳಲ್ಲಿ ಮಂಡಿಸುವ ಬಜೆಟ್ನಲ್ಲಿ ಕಾರ್ಮಿಕ ವರ್ಗದ ಬೇಡಿಕೆಗಳನ್ನು ಈಡೇರಿಸಲು ಹಣ ನೀಡಬೇಕು ಎಂದು ಸಿಐಟಿಯು ನೀಡಿರುವ ಕರೆಯ ಮೇರೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹಮ್ಮಿಕೊಳ್ಳಲಾಗಿರುವ ಧರಣಿಯು ಎರಡು ದಿನವಾದ ಬುಧವಾರ ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಿತು.
ಧರಣಿಯನ್ನುದ್ದೇಶಿಸಿ ಸಿಐಟಿಯು ಜಿಲ್ಲಾ ಮುಖಂಡ ಎಚ್.ನರಸಿಂಹ ಮಾತನಾಡಿ, ಕಾರ್ಮಿಕ ವರ್ಗದ ಬೇಡಿಕೆಗಳು ಇಂದು ನಿನ್ನೆಯದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟ ನಡೆಸಿ ಹಲವು ಸೌಲಭ್ಯಗಳನ್ನು ಪಡೆದಿದ್ದೇವೆ. ಆದರೆ ಸ್ವಾತಂತ್ರ್ಯ ಪಡೆದು 77 ವರ್ಷಗಳ ನಂತರವೂ ಕನಿಷ್ಠ ಕೂಲಿಗಾಗಿ, ಕಾರ್ಮಿಕರ ಸೌಲಭ್ಯಗಳಿಗಾಗಿ ಹೋರಾಟ ಧರಣಿ ಮಾಡಬೇಕಾದ ದುಸ್ಥಿತಿ ಬಂದಿದೆ ಎಂದು ಹೇಳಿದರು.
ವಿದೇಶಿ ಬಂಡವಾಳಗಾರರನ್ನು ಕೊಬ್ಬಿಸಲು ಮೋದಿ ಅವರು ಕರೋನ ಕಾಲದಲ್ಲಿ ತಂದ ನಾಲ್ಕು ನೂತನ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ತೀರ್ಮಾನಿಸಿದ್ದಾರೆ. ಇದನ್ನು ರಾಜ್ಯ ಸರಕಾರ ಜಾರಿ ಮಾಡಬಾರದು. ಮೋದಿ ನೀತಿ ಕಾಂಗ್ರೆಸ್ ಜಾರಿ ಮಾಡಿದರೆ ರಾಜ್ಯದ ಲಕ್ಷಾಂತರ ಕಾರ್ಮಿಕರು ಫೆಬ್ರವರಿ ತಿಂಗಳಲ್ಲಿ ವಿಧಾನಸೌಧಕ್ಕೆ ಬರಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರಕಾರ ಅಂಬೇಡ್ಕರ್ ಸಹಾಯ ಹಸ್ತ ಹಾಗೂ ಸಾರಿಗೆ ನೌಕರರಿಗೆ ಕಲ್ಯಾಣ ಮಂಡಳಿಯ ಗುರುತು ಚೀಟಿ ನೀಡುತ್ತಿದೆ. ಆದರೆ ಸಮರ್ಪಕ ಸೌಲಭ್ಯಗಳನ್ನು ಜಾರಿ ಮಾಡುವುದರಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಖಂಡನೀಯವಾಗಿದೆ. ಮಾರ್ಚ್ ತಿಂಗಳ ಬಜೆಟ್ನಲ್ಲಿ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಹಣ ನೀಡಬೇಕು ಎಂದು ಆಗ್ರಹಿಸಿದರು.
ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರಕಾರ ಮನೆಕಟ್ಟಲು ಸಹಾಯಧನ ಕೊಡಲು ಬಜೆಟ್ನಲ್ಲಿ ಅನುದಾನ ನೀಡಬೇಕು. ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ, ಕನಿಷ್ಠ ಕೂಲಿ ಕೊಡಿಸಲು ಮುಂದಾಗಬೇಕು. ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಧರಣಿಯನ್ನುದ್ದೇಶಿಸಿ ಸಿಐಟಿಯು ಮುಖಂಡರಾದ ಕೆ.ಶಂಕರ್, ಚಂದ್ರ ಶೇಖರ ವಿ., ಕವಿರಾಜ್ ಎಸ್., ಸುಶೀಲ ನಾಡ, ಶಶಿಧರ ಗೊಲ್ಲ, ವೆಂಕಟೇಶ್ ಕೋಣಿ, ಸದಾಶಿವ ಪೂಜಾರಿ, ಸಯ್ಯದ್ ಅಲಿ ಮಾತನಾಡಿದರು. ಬೀಡಿ ಕಾರ್ಮಿಕರ ಸಂಘದ ಉಮೇಶ್ ಕುಂದರ್, ಬಲ್ಕೀಸ್, ಕಟ್ಟಡ ಕಾರ್ಮಿಕರ ಸಂಘದ ಸುಭಾಷ್ ನಾಯಕ್, ರಾಮ ಕಾರ್ಕಡ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಭಾರತಿ, ನಳಿನಿ, ಮೋಹನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಮಿಕರ ವಿವಿಧ ಬೇಡಿಕೆಗಳು
ಮುಂಬರುವ ಬಜೆಟ್ನಲ್ಲಿ ಕಾರ್ಮಿಕರ ವರ್ಗಕ್ಕೆ ಮೀಸಲಿಡಬೇಕು. ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ ಮತ್ತು ಕನಿಷ್ಠ ಕೂಲಿ ಕೊಡಬೇಕು. ಕಲ್ಯಾಣ ಮಂಡಳಿ ರಚಿಸಿ ಗುರುತು ಚೀಟಿ ನೀಡಿದ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯಗಳನ್ನು ಜಾರಿ ಮಾಡಬೇಕು. ಕೇಂದ್ರ ಸರಕಾರ ತಂದಿರುವ 4 ಸಂಹಿತೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಬಾರದು.
ಕಟ್ಟಡ ಕಾರ್ಮಿಕರಿಗೆ ಬಜೆಟ್ ನಲ್ಲಿ ಮನೆಕಟ್ಟಲು ಸಹಾಯಧನಕ್ಕಾಗಿ ಹಣ ಕೊಡಬೇಕು. ಬೆಲೆ ಏರಿಕೆ ಆಧಾರದಲ್ಲಿ ಕನಿಷ್ಠ ಕೂಲಿ 31566ರೂ. ಜಾರಿ ಮಾಡಬೇಕು. ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಮಹಿಳೆಯ ರನ್ನು ರಾತ್ರಿ ಪಾಳಿ ಯಲ್ಲಿ ದುಡಿಸುವುದು ಕೈ ಬಿಡಬೇಕು. ಎಲ್ಲಾ ಮಹಿಳೆಯರಿಗೆ ವರ್ಷದಲ್ಲಿ ಕನಿಷ್ಠ 12 ದಿನಗಳು ಸಂಬಳ ಸಹಿತ ಮುಟ್ಟಿನ ರಜೆ ಜಾರಿಗೊಳಿಸಬೇಕು.
ಎಲ್ಲಾ ಅಸಂಘಟಿತ ಕಾರ್ಮಿಕರಕಲ್ಯಾಣಕ್ಕಾಗಿ ಭವಿಷ್ಯ ನಿಧಿಗಾಗಿ ಕನಿಷ್ಠ 500 ಕೋಟಿ ಬಜೆಟ್ನಲ್ಲಿ ನೀಡಬೇಕು. ಕಾರ್ಮಿಕರ ಎಲ್ಲಾ ಕಲ್ಯಾಣ ಮಂಡಳಿಗಳಲ್ಲಿ ಸಿಐಟಿಯುಗೆ ಪ್ರಾತಿನಿಧ್ಯ ನೀಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾ ಲಯಗಳನ್ನು ಸ್ಥಾಪಿಸಬೇಕು. ಕೇಂದ್ರ ಸರಕಾರ ಹೊಸದಾಗಿ ಜಾರಿಗೆ ತಂದಿರುವ ಮೂರು ಕ್ರಿಮಿನಲ್ ಕಾನೂನುಗಳನ್ನು ರದ್ದುಗೊಳಿಸಬೇಕು. ಡಾ.ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು.
ಕಟ್ಟಡ ಸಾಮಗ್ರಿಗಳ ಸಮಸ್ಯೆ ಪರಿಹಾರಕ್ಕೆ ಆಗ್ರಹ
ಕೆಂಪು ಕಲ್ಲು, ಮರಳು ಶಿಲೆಕಲ್ಲು ಜೆಲ್ಲಿ ಮುಂತಾದ ಕಟ್ಟಡ ಸಾಮಾಗ್ರಿಗಳು ದೊರೆಯದೇ ಕಾರ್ಮಿಕರ ಕೆಲಸಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಬೇಕು ಎಂದು ಜಿಲ್ಲೆಯ ಕಟ್ಟಡ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಮಸ್ಯೆ ಗಳನ್ನು ಇತ್ಯರ್ಥಪಡಿಸಲು ಶೀಘ್ರವೇ ಜಿಲ್ಲಾಡಳಿತ ಜಂಟಿ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದರು.
ಅಂಗನವಾಡಿ ನೌಕರರ ಜಿಲ್ಲಾ ಮಟ್ಟದ ಸಮಸ್ಯೆಗಳ ಪರಿಹಾರಕ್ಕೆ ಪ್ರತ್ಯೇಕ ಮನವಿ ಸಲ್ಲಿಸಿ, ಅಂಗನವಾಡಿ ಕಾರ್ಯ ಕರ್ತೆಯರು ಅಂಗನವಾಡಿಗಳಲ್ಲಿ ಅನುಭವಿಸುತ್ತಿರುವ ಮೊಟ್ಟೆ ಖರೀದಿ ಸಮಸ್ಯೆ, ಗ್ಯಾಸ್ ಸಿಲಿಂಡರ್ ಸಮಸ್ಯೆ, ಹರಿದ ಸೀರೆ ಉಡಲು ಕಡ್ಡಾಯ ಮಾಡುತ್ತಿರುವುದರ ವಿರುದ್ಧ, ನೋಂದಣಿ ಮಾಡಲು ಪುಸ್ತಕಗಳನ್ನು ಇಲಾಖೆ ನೀಡದಿರುವ ಬಗ್ಗೆ, ಕಟ್ಟಡಗಳ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ಪರಿಹರಿಸಲು ಮುಂದಾಗಬೇಕು ಎಂದು ಆಗ್ರಹಿಸಲಾಯಿತು.