ಎಲ್ಲ ಬೀಚ್ಗಳಲ್ಲಿ ಜೀವರಕ್ಷಕರಾಗಿ ಗೃಹರಕ್ಷಕ ಸಿಬ್ಬಂದಿಗಳ ನೇಮಕ: ಡಿಸಿ ಡಾ.ವಿದ್ಯಾಕುಮಾರಿ
ಉಡುಪಿ: ಗೃಹರಕ್ಷಕ ದಳದ ಸಿಬ್ಬಂದಿಗೆ ಈಜು ಸೇರಿದಂತೆ ವಿಶೇಷ ತರಬೇತಿ ನೀಡಿ ಉಡುಪಿ ಜಿಲ್ಲೆಯ ಎಲ್ಲ ಬೀಚ್ಗಳಿಗೆ ಜೀವರಕ್ಷಕರಾಗಿ ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಗೃಹರಕ್ಷಕ ದಳದ ವತಿಯಿಂದ ಇಂದು ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಗೃಹರಕ್ಷಕ ದಳದವರು ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಬೀಚ್ಗಳಲ್ಲಿಯೂ ಸಹ ಜೀವ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು ಮಲ್ಪೆ ಬೀಚ್ನಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕಾಗಿ 25 ಗೃಹರಕ್ಷಕ ದಳದವರನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಪೊಲೀಸ್ ಇಲಾಖೆಯ ಜೊತೆಯಲ್ಲಿ ಆಂತರಿಕ ಭದ್ರತಾ ಕಾರ್ಯ ಗಳನ್ನು ಗೃಹ ರಕ್ಷಕ ದಳದವರು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಗಳ ಕೊರತೆ ಅಥವಾ ಸಂಕಷ್ಟ ಸಂದರ್ಭದಲ್ಲಿ ಜಿಲ್ಲಾಡಳಿತದ ಜೊತೆ ಗೃಹ ರಕ್ಷಕ ದಳದವರು ಕೈಜೋಡಿಸಿ, ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ಗೃಹರಕ್ಷಕ ದಳದವರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದರ ಜೊತೆಗೆ ತಮ್ಮ ಕುಟುಂಬ ವರ್ಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿ, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವುದರ ಜೊತೆಗೆ ತಾವುಗಳು ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆ, ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಗೃಹ ರಕ್ಷಕ ದಳದವರು ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತಿತಿದ್ದಾರೆ. ಅಲ್ಲದೇ ಬೀಚ್ಗಳಲ್ಲಿಯೂ ಸಹ ಜೀವ ರಕ್ಷಕರಾಗಿ ಕಾರ್ಯನಿರ್ವಹಿಸುತಿತಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಕಡಲತೀರಗಳಲ್ಲಿ ಜೀವ ರಕ್ಷಕರಾಗಿ ಗೃಹ ರಕ್ಷಕದಳದವರನ್ನು ನಿಯೋಜಿಸಲಾಗುವುದು. ಇದಕ್ಕೆ ಈಜು ತರಬೇತಿಯನ್ನೂ ಸಹ ನೀಡಲಾಗುವುದು ಎಂದರು.
ಅಧ್ಯಕ್ಷತೆಯನ್ನು ಗೃಹರಕ್ಷಕ ದಳ ಉಡುಪಿ ಜಿಲ್ಲಾ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟ ಮುರಲೀ ಮೋಹನ್ ಚೂಂತಾರ್, ಚಿಕ್ಕಮಗಳೂರು ಜಿಲ್ಲಾ ಸಮಾದೇಷ್ಟೆ ನಸೀಮ್ ತಾಜ್, ಉತ್ತರ ಕನ್ನಡ ಜಿಲ್ಲಾ ಸಮಾದೇಷ್ಟ ಡಾ.ಸಂಜು ಟಿ.ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ. ಸ್ವಾಗತಿಸಿದರು. ಉಡುಪಿ ಜಿಲ್ಲಾ ಅಧೀಕ್ಷಕ ರತ್ನಾಕರ ಎಂ. ವಿಜೇತರ ಪಟ್ಟಿ ವಾಚಿಸಿದರು. ಬ್ರಹ್ಮಾವರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಚಿಕ್ಕಮಗಳೂರು ಜಿಲ್ಲಾ ಸಹಾಯಕ ಬೋಧಕ ಕರಿಬಸಪ್ಪವಂದಿಸಿದರು.
ಚಿಕ್ಕಮಗಳೂರು ತಂಡಕ್ಕೆ ಸಮಗ್ರ ಪ್ರಶಸ್ತಿ
ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದಲ್ಲಿ ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲಾ ಗೃಹರಕ್ಷಕ ತಂಡಗಳು ಭಾಗವಹಿಸಿದ್ದು, ಇದರಲ್ಲಿ ಚಿಕ್ಕಮಗಳೂರು ತಂಡ ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ.
ಪುರುಷರ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸಂದೀಪ್ ಎಚ್. ಹಾಗೂ ಮಹಿಳೆಯರ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಉಮಾ ಎನ್.ಎಸ್. ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸ ಲಾಯಿತು. ನಾಲ್ಕು ಜಿಲ್ಲೆಗಳ ಗೃಹರಕ್ಷಕ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.