ರಾಜ್ಯ ವಾಲಿಬಾಲ್ ತಂಡದಲ್ಲಿ ಉಡುಪಿ ದಲಿತ ವಿದ್ಯಾರ್ಥಿಗೆ ಅನ್ಯಾಯದ ಆರೋಪ: ಶಿಕ್ಷಣ ಇಲಾಖೆ ಸ್ಪಷ್ಟನೆ
ಉಡುಪಿ: ವಿಜಯಪುರ ಜಿಲ್ಲೆಯ ತಾಳಿಕೋಟೆ ಎಚ್.ಎಸ್. ಪಾಟೀಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ತಂಡ ಪ್ರಥಮ ಸ್ಥಾನ ಪಡೆದಿದ್ದು, ರಾಜ್ಯದಿಂದ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತಂಡದ ಆಯ್ಕೆಯ ಸಂದರ್ಭದಲ್ಲಿ ಉಡುಪಿ ದಲಿತ ವಿದ್ಯಾರ್ಥಿ ಸುಜೀತ್ಗೆ ಅನ್ಯಾಯ ಮಾಡಲಾಗಿದೆ ಎಂಬ ಆರೋಪದ ಕುರಿತು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಪಂದ್ಯಾಟದಲ್ಲಿ ಉತ್ತಮವಾಗಿ ಆಡಿದ ಉಡುಪಿ ಜಿಲ್ಲೆಯ ಸ್ಯಾಮುಲ್ ನಿಸ್ಸಿ ಅಂಚನ್ ಹಾಗೂ ವಿವೇಕ್ ದೇವಾಡಿಗ ಇವರು ರಾಷ್ಟ್ರಮಟ್ಟಕ್ಕೆ ಆಯ್ಕೆ ಯಾಗದಿರುವ ಬಗ್ಗೆ ದೂರು ಬಂದಿದ್ದು, ಈ ದೂರಿನ ಬಗ್ಗೆ ಪರಿಶೀಲಿಸಲು ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಇವರಿಗೆ ನ.28ರಂದು ತಿಳಿಸಲಾಗಿತ್ತು.
ವಿಜಯಪುರದ ಡಿಡಿಪಿಯು ಇವರು ರಾಜ್ಯಮಟ್ಟದ ವಾಲಿಬಾರ್ ಪಂದ್ಯಾಟದ ಸ್ಕೋರ್ ಶೀಟ್ನ್ನು ಮತ್ತು ಸಂಬಂಧಪಟ್ಟ ಪಂದ್ಯದ ವಿಡಿಯೋ ಗಳನ್ನು ಪರಿಶೀಲಿಸಿ ಸ್ಯಾಮುಲ್ ನಿಸ್ಸಿ ಅಂಚನ್ ಹಾಗೂ ವಿವೇಕ್ ದೇವಾಡಿಗ ಉತ್ತಮವಾಗಿ ಆಡಿ ತಂಡವನ್ನು ಗೆಲ್ಲಿಸಿರುವುದು ಕಂಡುಬಂದಿದೆ ಎಂಬುದನ್ನು ಗುರುತಿಸಿ ಅಲ್ಲದೇ ಸುಜೀತ್ ಮತು ಜಾಸೀರ್ ಅವರು ಹೆಚ್ಚಿನ ಪಂದ್ಯಗಳಲ್ಲಿ ಆಡದೇ ಇರುವುದನ್ನು ಗುರುತಿಸಿ ಆಯ್ಕೆ ಪಟ್ಟಿಯನ್ನು ತಯಾರಿಸಿ ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ. ಇದರಲ್ಲಿ ಉಡುಪಿ ಜಿಲ್ಲಾಡಳಿತದ ಯಾವುದೇ ಪಾತ್ರ ಇರುವುದಿಲ್ಲ ಎಂದು ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಡಿಡಿಪಿಯು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.