ಕೆಥೊಲಿಕ್ ಸಭಾದಿಂದ ವೃದ್ಧರ ಅನಾಥಾಶ್ರಮದಲ್ಲಿ ಕ್ರಿಸ್ಮಸ್ ಆಚರಣೆ
ಬ್ರಹ್ಮಾವರ, ಡಿ.22: ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಬ್ರಹ್ಮಾವರ ಸಮೀಪದ ಅಪ್ಪ ಅಮ್ಮ ಅನಾಥಾಶ್ರಮದ ನಿವಾಸಿಗಳೊಂದಿಗೆ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ರವಿವಾರ ಜರಗಿತು.
ಕಾರ್ಯಕ್ರಮವನ್ನು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಶ್ ಕರ್ನೆಲೀಯೋ ಮಾತನಾಡಿ, ಯೇಸುಕ್ರಿಸ್ತರು ಈ ಧರೆಗೆ ಮಾನವರಾಗಿ ಜನಿಸಿ ಅಶಕ್ತರು, ನೊವುಂಡವರ ಏಳಿಗೆಗಾಗಿ ತನ್ನ ಜೀವನದ ಕೊನೆಯವರೆಗೂ ಶ್ರಮಿಸಿದರು. ಕ್ರಿಸ್ಮಸ್ ಹಬ್ಬ ನಮ್ಮಲ್ಲಿ ಇರುವುದನ್ನು ಪರರೊಂದಿಗೆ ಹಂಚಿಕೊಂಡು ಹಬ್ಬದ ಆಚರಣೆ ಮಾಡುವ ಸಂದೇಶವನ್ನು ಸಾರುತ್ತದೆ. ಪರಸ್ಪರ ಸಂತೋಷವನ್ನು ಹಂಚುವ ಮೂಲಕ ಹಬ್ಬವನ್ನು ಆಚರಿಸಿದಾಗ ಕ್ರಿಸ್ಮಸ್ ಹಬ್ಬಕ್ಕೆ ನಿಜವಾದ ಅರ್ಥ ಬರಲು ಸಾಧ್ಯವಿದೆ ಎಂದರು.
ಸಂಘಟನೆಯ ವತಿಯಿಂದ ಆಶ್ರಮ ವಾಸಿಗಳ ಊಟದ ಖರ್ಚಿಗಾಗಿ ರೂ 20,000 ಧನ ಸಹಾಯವನ್ನು ಹಸ್ತಾಂತರಿಸಲಾ ಯಿತು. ಕಥೊಲಿಕ್ ಸಭಾ ಉಡುಪಿ ಪ್ರದೇಶದ ನಿಯೋಜಿತ ಅಧ್ಯಕ್ಷ ರೋನಾಲ್ಡ್ ಡಿಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಜಿ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ಪದಾಧಿಕಾರಿ ಶಾಂತಿ ಪಿರೇರಾ, ಕಲ್ಯಾಣಪುರ ವಲಯಾಧ್ಯಕ್ಷೆ ರೋಜಿ ಕ್ವಾಡ್ರಸ್, ಬ್ರಹ್ಮಾವರ ಘಟಕಾಧ್ಯಕ್ಷ ಜೊಯೇಲ್ ಡಿಆಲ್ಮೇಡಾ, ಕೋಶಾಧಿಕಾರಿ ಸ್ಟ್ಯಾನಿ ಡಿಸೋಜ ಉಪಸ್ಥಿತರಿದ್ದರು.