ಮಲ್ಪೆ ವಾಸುದೇವ ಸಾಮಗ ಸಂಸ್ಮರಣೆ- ಪ್ರಶಸ್ತಿ ಪ್ರದಾನ
ಕುಂದಾಪುರ: ಯಶಸ್ವೀ ಕಲಾವೃಂದ ಕೋಮೆ ಹಾಗೂ ಸಂಯಮ ಕೋಟೇಶ್ವರ ಸಹಯೋಗದೊಂದಿಗೆ ಶನಿವಾರ ಕುಂದಾಪುರ ತೆಕ್ಕಟ್ಟೆಯ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಯಕ್ಷಗಾನ ಕಲಾವಿದ ದಿ.ಮಲ್ಪೆ ವಾಸು ದೇವ ಸಾಮಗ ಅವರ 4ನೇ ಸಂಸ್ಮರಣಾ ಕಾರ್ಯಕ್ರಮದಲ್ಲಿ ವಾಸುದೇವ ಸಾಮಗ ಸಂಸ್ಮರಣಾ ಪ್ರಶಸ್ತಿಯನ್ನು ಸ್ತ್ರೀ ವೇಷಧಾರಿ ಎಂ.ಎ. ನಾಯ್ಕ್ ಅವರಿಗೆ ಪ್ರದಾನ ಮಾಡಲಾಯಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಯಕ್ಷಗಾನಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿ ಮೇರು ಕಲಾವಿದರಾಗಿ ಮೆರೆದ ದಿ.ಮಲ್ಪೆವಾಸುದೇವ ಸಾಮಗ ಅವರ ಬದುಕು ಅವರು ರಚಿಸಿದ ಯಕ್ಷಗಾನ ಕೃತಿಗಳು ಯಕ್ಷಗಾನಾಸಕ್ತರಿಗೆ ದಾರಿ ದೀಪ ಗಳಾಗಿವೆ. ವಾಸುದೇವ ಸಾಮಗ ತಂದೆಯ ಹಾದಿಯಲ್ಲಿ ಮುಂದು ವರಿದು ಯಕ್ಷಗಾನದ ಮೇರು ಕಲಾವಿದರಾಗಿ ಬೆಳೆದಿರುವುದು ಇದೀಗ ಇತಿಹಾಸ ಎಂದು ಹೇಳಿದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಮಾತನಾಡಿ, ವಾಸುದೇವ ಸಾಮಗ ಅವರು ಯಕ್ಷಗಾನ ಹಾಗೂ ಯಕ್ಷಗಾನ ಕಲೆಯ ಬಗ್ಗೆ ಅತೀ ಕಾಳಜಿ ಹೊಂದಿದ್ದವರು. ಕಲಾರಂಗ ಹಮ್ಮಿಕೊಂಡ ಯಕ್ಷಗಾನ ಕಲಾವಿದರ ಸಮಾವೇಶಕ್ಕೆ ತಪ್ಪದೇ ಹಾಜರಾಗಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಸ್ವಾಭಿಮಾನಿಯಾಗಿ ಬದುಕಿದ್ದವರು. ಒಬ್ಬ ಶ್ರೇಷ್ಠ ಸೃಜನಶೀಲ ಕಲಾವಿದರಾಗಿದ್ದರು ಎಂದರು.
ವಾಸುದೇವ ಸಾಮಗ ಅವರ ಮಗ ಪ್ರದೀಪ್ ಸಾಮಗ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ, ಪತ್ರಕರ್ತ ಬಾ.ಸಾಮಗ, ಮೇಳದ ಯಜಮಾನ ಪಿ.ಕಿಶನ್ ಹೆಗ್ಡೆ, ಅರ್ಥಧಾರಿ ಉಜಿರೆ ಅಶೋಕ್ ಭಟ್, ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ಉದ್ಯಮಿ ಡಾ.ವೈಕುಂಠ ಹೇರ್ಳೆ, ಯಶಸ್ವಿ ಕಲಾ ವೃಂದದ ವೆಂಕಟೇಶ್ ವೈದ್ಯ, ಮೀರಾ ವಾಸುದೇವ ಸಾಮಗ ಮೊದಲಾದವರು ಉಪಸ್ಥಿತರಿದ್ದರು.
ದಿ.ವಾಸುದೇವ ಸಾಮಗರು ಬರೆದ ’ಯಕ್ಷ ರಸಾಯನ’ ಕೃತಿಯಿಂದ ಆಯ್ದ ಭಾಗಗಳ ಯುಗಳ ಸಂವಾದ(ತಾಳ ಮದ್ದಲೆ) ನಡೆಯಿತು. ದುರಂತ ನಾಯಕಿ ಯಕ್ಷ ನಾಟಕ ಪ್ರಸ್ತುತಿಗೊಂಡಿತು.