ಬಹುರಾಷ್ಟ್ರೀಯ ಕಂಪೆನಿಗಳ ಕಪಿಮುಷ್ಠಿಯಲ್ಲಿ ಕೃಷಿಕ, ಕೃಷಿ ಕ್ಷೇತ್ರ: ಶಿವಸುಂದರ್ ಕಳವಳ
ಬ್ರಹ್ಮಾವರದಲ್ಲಿ ರೈತ ದಿನಾಚರಣೆ
ಬ್ರಹ್ಮಾವರ: ಬಹುರಾಷ್ಟ್ರೀಯ ಕಂಪೆನಿಗಳು ದೇಶದ ರೈತರನ್ನು ಹಾಗೂ ಕೃಷಿ ಕ್ಷೇತ್ರವನ್ನು ತಮ್ಮ ಕಪಿಮುಷ್ಠಿಯಲ್ಲಿ ಇರಿಸಿ ಕೊಂಡಿವೆ. ಈ ಮೂಲಕ ರೈತನ ಅವಕಾಶವನ್ನು ಅವು ಕಸಿದುಕೊಂಡಿವೆ ಎಂದು ಹಿರಿಯ ಚಿಂತಕ ಹಾಗೂ ಲೇಖಕ ಬೆಂಗಳೂರಿನ ಶಿವಸುಂದರ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ರೈತ ಸಂಘದ ಆಶ್ರಯದಲ್ಲಿ ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಉದ್ಘಾಟಿಸಿ ಅವರು ವಿಶೇಷ ಉಪನ್ಯಾಸ ನೀಡಿದರು.
ಹೀಗಾಗಿ ದೇಶದಲ್ಲಿ ಕೃಷಿಕರು ಬೆವರು ಹರಿಸಿ ಬೆಳೆದ ಬೆಳೆಗೆ ಬೆಲೆ ನಿಗದಿ ಹಾಗೂ ಅದರ ನಿಯಂತ್ರಣ ಮಾಡಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಆದಾಯದ ಖಾತ್ರಿ ಇದ್ದಾಗ ಮಾತ್ರ ರೈತ ಬದುಕಲು ಸಾಧ್ಯ ಎಂದವರು ಅಭಿಪ್ರಾಯಪಟ್ಟರು.
ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕುಂದಾಪುರದ ಮಾಜಿ ಶಾಸಕ ಕೆ.ಪ್ರತಾಪಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಹಾಗೂ ಲೇಖಕ, ಅಂಕಣಕಾರ ರಾಜಾರಾಮ ತಲ್ಲೂರು, ಕುಂದಾಪುರ ತಾಲೂಕು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಸೀತಾರಾಮ ಗಾಣಿಗ, ಉಡುಪಿ ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಶಶಿಧರ ಶೆಟ್ಟಿ ಎಲ್ಲೂರು, ಸಿಪಿಎಂ ಪಕ್ಷದ ನಾಯಕ ಬಾಲಕೃಷ್ಣ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ, ಪ್ರದೀಪ್ ಬಲ್ಲಾಳ್, ಕೃಷ್ಣರಾಜ್ ಶೆಟ್ಟಿ ಚೋರಾಡಿ, ಭೋಜ ಕುಲಾಲ್ ಹಾಗೂ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಂಶೋಧನಾ ನಿರ್ದೇಶಕ, ಕೃಷಿ ವಿಜ್ಞಾನಿ ಡಾ.ಧನಂಜಯ ಬಿ. ಹಾಗೂ ಡಾ. ಲಕ್ಷ್ಮಣ್ ರೈತರಿಗೆ ಕೃಷಿಯ ಕುರಿತಂತೆ ಮಾಹಿತಿಗಳನ್ನು ನೀಡಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬೆಳ್ವೆ ಸತೀಶ್ ಕಿಣಿ ಸ್ವಾಗತಿಸಿದರೆ ಸುಬ್ರಹ್ಮಣ್ಯ ಪಡುಕೋಣೆ ಕಾಯಕ್ರಮ ನಿರೂಪಿಸಿದರು. ಉದಯ ಕುಮಾರ್ ಶೆಟ್ಟಿ ವಂದಿಸಿದರು.