ಕ್ರಿಸ್ಮಸ್ ಶಾಂತಿ, ಏಕತೆಯನ್ನು ತರಲಿ: ಬಿಷಪ್ ರೆ.ಹೇಮಚಂದ್ರ
ಹೇಮಚಂದ್ರ
ಉಡುಪಿ, ಡಿ.24: ಕ್ರಿಸ್ತ ಜಯಂತಿ ಅಥವಾ ಕ್ರಿಸ್ಮಸ್ ಹಬ್ಬ ವಿಶ್ವದೆಲ್ಲೆಡೆ ಕ್ರೈಸ್ತ ಸಮುದಾಯ ಆಚರಿಸುವ ಹಬ್ಬವಾಗಿದೆ. ಯೇಸುಕ್ರಿಸ್ತನ ಬೋಧನೆಯ ಬೆಳಕು ಮತ್ತೊಮೆ ಜನಿಸಿ ಲೋಕದಲ್ಲಿ ಪ್ರಕಾಶಿಸಲಿ. ಎಲ್ಲಾ ಸಮುದಾಯಕ್ಕೆ ಸಮಾಧಾನ ಶಾಂತಿಯನ್ನು ಎಲ್ಲರಲ್ಲಿ ಏಕತೆಯನ್ನು ತರಲಿ. ನೂತನ ವರ್ಷವು ಎಲ್ಲರಲ್ಲಿ ಪರಸ್ಪರ ಗೌರವಿಸುವ ಹರ್ಷದ ವರ್ಷವಾಗಿ ಬರಲಿ. ದೇವರು ಎಲ್ಲರನ್ನೂ ಆಶೀರ್ವಾದಿಸಲಿ ಎಂದು ಕರ್ನಾಟಕ ಸದರ್ನ್ ಡಯಾಸಿಸ್ನ ಚರ್ಚ್ ಆಫ್ ಸೌತ್ ಇಂಡಿಯಾದ ಬಿಷಪ್ ರೆ.ಹೇಮಚಂದ್ರ ಕುಮಾರ್ ತಮ್ಮ ಕ್ರಿಸ್ಮಸ್ ಸಂದೇಶದಲ್ಲಿ ಹಾರೈಸಿದ್ದಾರೆ.
ಮಾನವನಾಗಿ ಜನಿಸಿದ ಯೇಸು ಮಾನವರ ಮಧ್ಯದಲ್ಲಿ ಮಾನವತೆಯನ್ನು ಕಾಪಾಡಿಕೊಂಡು ಬದುಕಲು ಜೀವಿಸಿ ತೋರಿ ಸಿದ್ದಾನೆ. ಮಕ್ಕಳಿಗೆ, ಮಹಿಳೆಯ ರಿಗೆ, ಸಮಾಜ ಬಾಹೀರರಾದ ಜನರಿಗೆ, ಶೋಷಿತ ಸಮಾಜಕ್ಕೆ, ಕಡೆಗಣಿಸಲ್ಪಟ್ಟ ಸಮಾ ಜಕ್ಕೆ ಗೌರವಯುತವಾದ ನೆಲೆಯನ್ನು ಕಂಡುಕೊಳ್ಳಲು ನಾಯಕತ್ವ ನೀಡುವುದು ಹೇಗೆ ಸಾಧ್ಯವೆಂಬುದನ್ನು ತನ್ನ ಸ್ವ ಅರ್ಪಣೆಯ ಜೀವನ, ಬೋಧನೆ, ಸೇವೆ, ಶ್ರಮ, ತ್ಯಾಗ, ಮರಣ, ಪುನರುತ್ಥಾನದ ಮೂಲಕ ತೋರಿಸಿದ್ದಾನೆ.
ಯೇಸುಕ್ರಿಸ್ತನ ಜನನದಲ್ಲಿ ಜನನದ ಉದ್ದೇಶವನ್ನು ಅರಿಯದಿದ್ದರೆ ಅದೊಂದು ಸಂಪ್ರದಾಯಿಕೆ ಆಚರಣೆ ಹಾಗೂ ಸಂಭ್ರಮವಾಗಿ ಉಳಿಯುತ್ತದೆ. ಆದರೆ ಉದ್ದೇಶವನ್ನು ಅರ್ಥೈಸಿಕೊಳ್ಳುವುದಾದರೆ ಜನನದ ನಿಜ ಆಚರಣೆಯಾಗಲಿದೆ. ದೇವ ಮಾನವ ಸಂಬಂಧದ ನಿಜ ಅರ್ಥ ಗ್ರಹಿಸಲಿಕ್ಕೆ ಸಾಧ್ಯವಾಗಿಸುತ್ತದೆ. ಯೇಸುಕ್ರಿಸ್ತನ ಜನನ ಸುವಾರ್ತೆಯಾದ ಯೇಸುವನ್ನು ಪ್ರಟಿಸುತ್ತದೆ.
ಯೇಸುಕ್ರಿಸ್ತನ ಜನನದ ಸುವಾರ್ತೆ ಮಾನವ ಮೌಲ್ಯಾಧಾರಿತವಾದದ್ದು. ಮಾನವ ಮಾನವ ಸಂಬಂಧದ ವೃದ್ಧಿ, ದೇವ ಮಾನವ ಸಂಬಂಧದ ವೃದ್ಧಿ, ಮಾನವ ಪರಿಸರದೊಂದಿಗೆ ಗೌರವದಿಂದ ಜೀವಿಸಲು ಹಾಗೂ ಮಾನವರಾಗಿ ಪರಸ್ಪರ ಗೌರವ, ಪ್ರೀತಿ, ಸಂತೋಷ, ಸಮಾಧಾನ, ದಯೆ, ಕರುಣೆ, ಎಲ್ಲರಲ್ಲೂ ದೇವರ ಸ್ವರೂಪವನ್ನು ಕಂಡು ಸಹೋದರ ಸಹೋದರಿಯರಾಗಿ ಜೀವಿಸಲು ಯೇಸುಕ್ರಿಸ್ತನ ಜನನದ ಸುವಾರ್ತೆಯು ಬಲತುಂಬುತ್ತದೆ ಎಂದು ಅವರು ತಿಳಿಸಿದ್ದಾರೆ.