ಉಡುಪಿ ಜಿಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ಕಾರ್ಯಾಗಾರ
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ಮೀಫ್) ಮತ್ತು ಅಲ್ -ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆ ಮೂಳೂರು ಇದರ ಆಶ್ರಯದಲ್ಲಿ ಮೀಫ್ ಪ್ರಸಕ್ತ ಸಾಲಿನ ಉಭಯ ಜಿಲ್ಲೆಗಳಲ್ಲಿ ಹಮ್ಮಿಕೊಂಡ 8 ಕಾರ್ಯಾಗಾರಗಳ ಪೈಕಿ ಮೊದಲನೇ ಕಾರ್ಯಾಗಾರವು ಉಡುಪಿ ಮತ್ತು ಸುತ್ತಮುತ್ತಲ ತಾಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ‘ ಪರೀಕ್ಷಾ ಪೂರ್ವ ಸಿದ್ಧತೆ, ವಿಜ್ಞಾನ ಮತ್ತು ಗಣಿತ ವಿಷಯವಾರು ತರಬೇತಿಯು ಮಂಗಳವಾರ ಅಲ್ ಇಹ್ಸಾನ್ ಮೂಳೂರಿನಲ್ಲಿ ಜರಗಿತು.
ಮೀಫ್ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ಜೋಕಟ್ಟೆ ಅಧ್ಯಕ್ಷತೆಯನ್ನು ವಹಿಸಿ, ಸಂಸ್ಥೆಯು ಅರ್ಹ ಮೀಫ್ ವಿದ್ಯಾರ್ಥಿಗಳಿಗೆ ನೀಡಲ್ಪಡುವ ಸೌಲಭ್ಯ ಗಳನ್ನು ವಿವರಿಸಿದರು.
ಕಾರ್ಯಗಾರವನ್ನು ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಎಲ್ಲಮ್ಮ ಉದ್ಘಾಟಿಸಿದರು. ಮೀಫ್ ಉತ್ತರ ವಲಯ ಉಪಾಧ್ಯಕ್ಷ ಶಾಬಿಹ್ ಅಹ್ಮದ್ ಖಾಝಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಮೀಫ್ ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್, ಸದಸ್ಯರಾದ ಪರ್ವೆಝ್ ಅಲಿ, ಅಲ್ ಇಹ್ಸಾನ್ ಮೂಳೂರು ಜನರಲ್ ಮ್ಯಾನೇಜರ್ ಮೌಲಾನ ಮುಸ್ತಫ ಸಅದಿ, ಆಡಳಿತ ಅಧಿಕಾರಿ ಯೂಸುಫ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಹಬೀಬ್ ರಹಿಮಾನ್ ಕೆ.ಎಸ್ ಸ್ವಾಗತಿಸಿ, ಹೈಸ್ಕೂಲ್ ಮುಖ್ಯೋಪಾಧ್ಯಾಯಿನಿ ಅಫ್ರೀನ್ ಖಾನ್ ವಂದಿಸಿದರು. ಶಿಕ್ಷಕ ಕಲಂದರ್ ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಣ ಇಲಾಖೆಯ ಜಿಲ್ಲಾ ತರಬೇತುದಾರ ಸೈಯದ್ ಶರೀಫ್ ನಾರಾವಿ ಮತ್ತು ರಮ್ಯಾ ಎಕ್ಕಾರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯಾಗಾರಗಳನ್ನು ನಡೆಸಿಕೊಟ್ಟರು.
ಜಿಲ್ಲೆಯ ವಿವಿಧ ಶಾಲೆಗಳ ಸುಮಾರು 300 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಮೂಳೂರು ಅಲ್ ಇಹ್ಸಾನ್ ಸಂಸ್ಥೆ ವಹಿಸಿತ್ತು.