ಮಾನವ ಹಕ್ಕುಗಳು ಪ್ರಜಾಪ್ರಭುತ್ವದ ಪ್ರತೀಕ: ಪ್ರಶಾಂತ ನೀಲಾವರ
ಉಡುಪಿ: ವಿಶ್ವದ ಚರಿತ್ರೆಯಲ್ಲಿ ಮಾನವ ಹಕ್ಕುಗಳ ಹೋರಾಟಕ್ಕೆ ಬಹುದೊಡ್ಡ ಇತಿಹಾಸವಿದೆ. ಇಂದು ನಾವು ಬದುಕುವ ನೆಮ್ಮದಿಯ ಬದುಕಿಗೆ ಮಾನವ ಹಕ್ಕುಗಳೇ ತಳಹದಿ. ಮಾನವ ಹಕ್ಕುಗಳು ಪ್ರಜಾಪ್ರಭುತ್ವದ ನೈಜ ಪ್ರತೀಕ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ ನೀಲಾವರ ಹೇಳಿದ್ದಾರೆ.
ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇಲ್ಲಿನ ರೆಡ್ ರಿಬ್ಬನ್ ಕ್ಲಬ್ ಕಿರಿಯ ಯುವ ರೆಡ್‌ಕ್ರಾಸ್ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಮಾನವ ಹಕ್ಕು ಗಳ ಕುರಿತಾದ ಅರಿವು ಇಂದು ಅತೀ ಅಗತ್ಯವಾಗಿದೆ. ಈ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಮಹತ್ವದ್ದಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರೆಡ್‌ಕ್ರಾಸ್ ಖಜಾಂಚಿ ರಮಾದೇವಿ, ನಿಕಟಪೂರ್ವ ಖಜಾಂಚಿ ಚಂದ್ರಶೇಖರ್ ಹಾಗೂ ಇತರರು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಪ್ರಿಯಕಾರಿಣಿ ಜೈನ್ ಕಾರ್ಯಕ್ರಮ ನಿರೂಪಿಸಿ, ರೆಡ್ ರಿಬ್ಬನ್ ಕ್ಲಬ್ ಸಂಯೋಜಕಿ ಸುಮನ ವಂದಿಸಿದರು.