ವೃದ್ಧ ದಂಪತಿಯ ಮನವಿಗೆ ತಹಶೀಲ್ದಾರ್ ಸ್ಪಂದನೆ: ಹೊಸ ಸೇತುವೆಯ ಭರವಸೆ
ಪಡುಬಿದ್ರೆ ಅವರಾಲುಮಟ್ಟುವಿನಲ್ಲಿ ಶಿಥಿಲಗೊಂಡ ಕಾಲುಸಂಕ
ಸಾಂದರ್ಭಿಕ ಚಿತ್ರ
ಪಡುಬಿದ್ರೆ: ಶಿಥಿಲಗೊಂಡಿರುವ ಕಾಲುಸಂಕದಲ್ಲಿ ಪ್ರತಿನಿತ್ಯ ಜೀವ ಕೈಯಲ್ಲಿ ಹಿಡಿದುಕೊಂಡು ದಾಟುವ ವಯೋವೃದ್ಧ ದಂಪತಿಯ ನೋವಿಗೆ ಸ್ಪಂದಿಸಿರುವ ತಹಶೀಲ್ದಾರ್, ಹೊಸ ಸೇತುವೆ ನಿರ್ಮಿಸುವ ಭರವಸೆಯನ್ನು ನೀಡಿದ್ದಾರೆ.
ಪಲಿಮಾರು ಗ್ರಾಪಂ ವ್ಯಾಪ್ತಿಯ ಅವರಾಲುಮಟ್ಟುವಿನ ವೃದ್ಧ ದಂಪತಿ 70 ವರ್ಷದ ವಾಸಂತಿ ಹಾಗೂ 74 ವರ್ಷದ ಬೋಜ ಸಾಲ್ಯಾನ್ ಅವರ ಮನೆಗೆ ತಲುಪಲು ಏಕೈಕ ದಾರಿಯಾಗಿರುವ ಕಾಲು ಸಂಕ ಇದೀಗ ಸಂಪೂರ್ಣ ಶಿಥಿಲಗೊಂಡಿದೆ. ಇಂದೋ ನಾಳೆಯೋ ಮುರಿದು ಬೀಳುವ ಪರಿಸ್ಥಿತಿಯಲ್ಲಿ ಇರುವ ಈ ಕಾಲು ಸಂಕದಲ್ಲೇ ದಂಪತಿ, ದಿನಸಿ ತರಲು, ಹೊರಗಿನ ಜನರನ್ನು ಭೇಟಿ ಮಾಡಲು, ಪೇಟೆಗೆ ಬರಬೇಕು. ಶಿಥಿಲಗೊಂಡಿರುವ ಸಂಕದ ಹಲಗೆಯ ಮೇಲೆಯೇ ಜೀವ ಕೈಲಿ ಹಿಡಿದುಕೊಂಡು ದಂಪತಿ ನಡೆಯಬೇಕಾಗಿದೆ.
‘ದಿನಸಿ, ಔಷಧಿ ತರಲು ನಾನೇ ಈ ಮುರುಕಲು ಸಂಕದ ಮೂಲಕ ಸಾಗಬೇಕಾಗಿದೆ. ಇದ್ದ ಒಬ್ಬ ಮಗಳನ್ನು ಮದುವೆ ಮಾಡಿ ಕೊಟ್ಟಿದ್ದೇವೆ. ಗಂಡು ಮಕ್ಕಳಿಲ್ಲ. ಇದೀಗ ನಾವಿಬ್ಬರೇ ಇದ್ದೇವೆ. ನಮ್ಮ ಜೀವನ ದುಸ್ತರವಾಗಿದೆ. ಒಂದು ಸುರಕ್ಷಿತ ಕಾಲು ಸೇತುವೆ ನಿರ್ಮಿಸಿಕೊಟ್ಟರೆ ಬಹಳ ಸಹಾಯವಾಗುತ್ತದೆ ಎಂದು ಭೋಜ ಸಾಲ್ಯಾನ್ ಮನವಿ ಮಾಡಿಕೊಂಡಿದ್ದರು.
ತಹಶೀಲ್ದಾರ್ ಪರಿಶೀಲನೆ: ದಂಪತಿಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಕಾಪು ತಹಶೀಲ್ದಾರ್ ಪ್ರತಿಬಾ ಆರ್. ಸ್ವತಃ ತಾವೇ ಸ್ಥಳಕ್ಕೆ ತೆರಳಿ ಶಿಥಿಲಗೊಂಡ ಕಾಲು ಸಂಕವನ್ನು ಪರಿಶೀಲಿಸಿದರು. ತಾವೇ ಸೇತುವೆಯಲ್ಲಿ ನಡೆದುಕೊಂಡು ಹೋಗಿ ವೃದ್ಧ ದಂಪತಿಯ ಮನೆಗೆ ತೆರಳಿದ ವಿಚಾರಿಸಿದರು. ಅಲ್ಲದೆ ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದರು.
‘ವಾಸಂತಿ, ಭೋಜ ಸಾಲ್ಯಾನ್ ವೃದ್ಧ ದಂಪತಿ ಬದುಕು ನಿಜಕ್ಕೂ ಶೋಚನೀಯವಾಗಿದೆ. ನಾನೇ ಸ್ವತಃ ಈ ಹಲಗೆಯ ಮೇಲೆ ನಡೆದುಕೊಂಡು ಬಂದೆ. ಅದರಲ್ಲಿ ನಡೆಯಲು ತುಂಬಾ ಭಯವಾಗುತ್ತದೆ. ಕಾಲಿಟ್ಟರೆ ಇಡೀ ಸಂಕ ಅಲುಗಾಡುತ್ತದೆ. ಒಂದು ಹೆಜ್ಜೆ ಊರುವಷ್ಟು ಮಾತ್ರವೇ ಅಗಲವಿರುವ ಶಿಥಿಲಗೊಂಡ ಮರದ ಹಲಗೆಯ ಮೇಲೆ ನಡೆದುಕೊಂಡು ಬಂದು ಹೊಳೆ ದಾಟಿ ತಮ್ಮ ದಿನ ನಿತ್ಯದ ಅಗತ್ಯ ಪೂರೈಸಿಕೊಳ್ಳಬೇಕಾದ ಪರಿಸ್ಥಿತಿ ಈ ವೃದ್ಧ ದಂಪತಿಯದ್ದಾಗಿದೆ’ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಪಕ್ಕದಲ್ಲೇ ಇರುವ ಇನ್ನೊಂದು ಮನೆಯವರು ಈ ಕಷ್ಟ ಸಹಿಸಲಾಗದೆ ಈಗಾಗಲೇ ಸ್ವಂತ ಮನೆ ತೊರೆದು ಬೇರೆ ಕಡೆ ಹೋಗಿದ್ದಾರೆ. ಆದರೆ ಈ ವೃದ್ಧ ದಂಪತಿ ದಿಕ್ಕು ಕಾಣದೆ, ಈ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಸೂರು ಹೊಳೆಗೆ ಸುಭದ್ರ ಸೇತುವೆ ನಿರ್ಮಿಸಿಕೊಡಲು ಮನವಿ ಮಾಡಿಕೊಂಡಿದ್ದಾರೆ. ಓಡಾಡಲು ಸುರಕ್ಷಿತವಾದ ಸೇತುವೆ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಲಾಗು ವುದು. ಸಂಬಂಧಪಟ್ಟ ಇಲಾಖೆ ಮತ್ತು ಯಾರಾದರೂ ದಾನಿಗಳ ಸಹಕಾರ ದಿಂದ ಇದನ್ನು ಸಾಧ್ಯವಾಗಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಭರವಸೆ ನೀಡಿದರು.
ಗಮನಕ್ಕೆ ತಂದ ಗ್ರಾಮ ಒನ್ನ ಇಸ್ಮಾಯಿಲ್!
ದಂಪತಿಯ ಈ ಕಷ್ಟದ ಪರಿಸ್ಥಿತಿಯನ್ನು ಪಲಿಮಾರು ಗ್ರಾಮ ಒನ್ ನಡೆಸುತ್ತಿರುವ ಇಸ್ಮಾಯಿಲ್ ಪಲಿಮಾರು. ತಹಶಿಲ್ದಾರ್ರವರ ಗಮನಕ್ಕೆ ತಂದಿದ್ದರು. ಆ ಮೂಲಕ ಈ ಸಮಸ್ಯೆ ಬೆಳಕಿಗೆ ಬಂತು. ಅದರಂತೆ ತಹಶಿಲ್ದಾರ್ ಸ್ಥಳಕ್ಕೆ ಭೇಟಿ ನೀಡುವಂತೆಯೂ ಇಸ್ಮಾಯಿಲ್ ಶ್ರಮ ವಹಿಸಿದ್ದರು. ಅದೇ ರೀತಿ ತಾನು ಕೂಡ ಸೇತುವೆ ನಿರ್ಮಿಸಿಕೊಡಲು ಸಹಕರಿಸುವುದಾಗಿ ತಿಳಿಸಿದ್ದಾರೆ.
ಪಲಿಮಾರು ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಸದಸ್ಯರಾದ ಜಯಂತಿ, ಸತೀಶ್ ದೇವಾಡಿಗ, ಯೋಗಾನಂದರವರು ಈ ವೃದ್ಧ ದಂಪತಿಗೆ ರಸ್ತೆ ನಿರ್ಮಿಸಿಕೊಡಲು ಸಹಕರಿಸುವುದಾಗಿ ತಿಳಿಸಿದ್ದಾರೆ.