ಮಕ್ಕಳ ಮಾತನ್ನು ದಿನವೂ ಕೇಳಬೇಕು: ಹೆತ್ತವರಿಗೆ ಡಾ.ಬಲ್ಲಾಳ್ ಸಲಹೆ
33ನೇ ಮದ್ಯವ್ಯಸನ ವಿಮುಕ್ತಿ ಶಿಬಿರಕ್ಕೆ ಚಾಲನೆ
ಉಡುಪಿ: ಹೆತ್ತವರು ತಮ್ಮ ಮಕ್ಕಳ ಮಾತನ್ನು ಪ್ರತಿದಿನವೂ ಆಲಿಸುತ್ತಿರಬೇಕು. ಇದರಿಂದ ಅವರು ದುಶ್ಚಟ, ಕೆಟ್ಟ ಗೆಳೆಯರ ಸಹವಾಸಕ್ಕೆ ಬಲಿಯಾಗದಂತೆ ತಡೆಯಲು ಸಾದ್ಯವಾಗುತ್ತದೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಹೆತ್ತವರು ಹಾಗೂ ಪೋಷಕರಿಗೆ ಕಿವಿಮಾತು ಹೇಳಿದ್ದಾರೆ.
ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ದೊಡ್ಡನಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ, ಭಾರತೀಯ ವೈದ್ಯಕೀಯ ಸಂಘ(ಐಎಂಎ) ಉಡುಪಿ ಕರಾವಳಿ ಹಾಗೂ ರೋಟರಿ ಕ್ಲಬ್ ಉಡುಪಿ ಮಣಿಪಾಲ ಇವರ ಸಹಯೋಗದಲ್ಲಿ ದೊಡ್ಡಣಗುಡ್ಡೆಯ ಡಾ.ಎ. ವಿ.ಬಾಳಿಗಾ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಹತ್ತು ದಿನಗಳ ಕಾಲ ಆಯೋಜಿಸ ಲಾಗಿರುವ 33ನೇ ಮದ್ಯವ್ಯಸನ ವಿಮುಕ್ತಿ ಮತ್ತು ವಸತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಪ್ರತಿ ವ್ಯಕ್ತಿಗೂ ಆತ ಮಾಡುವ ಕೆಲಸದಲ್ಲಿ ಬದ್ಧತೆ, ಗುಣಮಟ್ಟ ಅತಿ ಮುಖ್ಯ. ಮಾನಸಿಕ, ದೈಹಿಕ ಆರೋಗ್ಯವುಳ್ಳ ವ್ಯಕ್ತಿ ಗಳಿಂದ ಮಾತ್ರ ಸಮಾಜ ಆರೋಗ್ಯದಿಂದ ಇರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮಣಿಪಾಲ ಕೆಎಂಸಿಯ ಮನೋವೈದ್ಯಕೀಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅನಿಲ್ ಕುಮಾರ್ ಎಂ.ಎನ್. ಮಾತ ನಾಡಿ, ಮದ್ಯವ್ಯಸನ ಕಾಯಿಲೆಯು ಸಾಮಾಜಿಕ, ಆರೋಗ್ಯ, ಕಾನೂನಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದ ಹೇಳಿದರು.
ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಹಾಗೂ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ ಅವರು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇದರ ಅಧ್ಯಕ್ಷ ಡಾ.ಸುರೇಶ್ ಶೆಣೈ ಮಾತನಾಡಿದರು.
ಸನ್ಮಾನ: ಇಲ್ಲೇ ಈ ಹಿಂದೆ ನಡೆದ ಮದ್ಯವ್ಯಸನ ವಿಮುಕ್ತಿ ಶಿಬಿರದಲ್ಲಿ ಶಿಬಿರಾರ್ಥಿಗಳಾಗಿ ಭಾಗವಹಿಸಿ ಹಲವು ವರ್ಷಗಳಿಂದ ಮದ್ಯ ಮುಕ್ತ ಜೀವನ ನಡೆಸುತ್ತಿರುವ ಸಂತೋಷ್, ರಾಘವೇಂದ್ರ, ಸೋಮಯ್ಯ, ರಾಮ, ಪ್ರತಾಪ್, ಜಯರಾಮ್ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಡಾ. ಮಾನಸ್ ಇ.ಎಸ್., ಡಾ.ದೀಪಕ್ ಮಲ್ಯ, ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷ ಸುಭಾಷ್ ಬಂಗೇರ ಉಪಸ್ಥಿತರಿದ್ದರು.
ಡಾ.ಎ.ವಿ.ಬಾಳಿಗಾ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯಾ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮದ್ಯ ವ್ಯಸನ ವಿಮುಕ್ತರನ್ನು ಸೌಮ್ಯಾ ಮತ್ತು ರಕ್ಷಿತಾ ಪರಿಚಯಿಸಿದರು. ಪ್ರಮೀಳಾ ಡಿಸೋಜಾ ನಿರೂಪಿಸಿ, ನಾಗರಾಜ್ ಮೂರ್ತಿ ವಂದಿಸಿದರು. ಶಿಬಿರದಲ್ಲಿ ಇಬ್ಬರು ಮಹಿಳೆಯರು ಹಾಗೂ 41 ಮಂದಿ ಪುರುಷರು ಪಾಲ್ಗೊಂಡಿದ್ದಾರೆ.