ಹೊಸ ಚಿಗುರಿನೊಂದಿಗೆ ಯಕ್ಷಗಾನ ಕಲೆ ಬೆಳೆಯಲಿ: ಡಾ.ತಲ್ಲೂರು
ಕಮಲಶಿಲೆಯಲ್ಲಿ ನಾದಾವಧಾನ ವಿಶೇಷ ಕಾರ್ಯಾಗಾರ
ಉಡುಪಿ, ಜ.6: ಹಳೆ ಬೇರು ಹೊಸ ಚಿಗುರಿನೊಂದಿಗೆ ಯಕ್ಷಗಾನ ಸಹ ಹೊಸತನ ಬೆಳೆಸಿಕೊಂಡು ತನ್ನ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಬೆಳೆದರೆ ಅದು ಜನಾನುರಾಗಿಯಾಗಿರುತ್ತದೆ. ಆಧುನಿಕತೆಯ ಹೆಸರಿನಲ್ಲಿ ಪ್ರೇಕ್ಷಕರನ್ನು ರಂಜಿಸುವ ಧಾವಂತದಲ್ಲಿ ಕಲಾವಿದ ಹೆಜ್ಜೆ ತಪ್ಪಬಾರದು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.
ಕಮಲಶಿಲೆಯ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಳದ ಸಭಾಂಗಣ ದಲ್ಲಿ ರವಿವಾರ ಸಂಜೆ ಕುಂದಾಪುರದ ನಾದಾವ ಧಾನ ಪ್ರತಿಷ್ಠಾನದ ವತಿಯಿಂದ ಆನ್‌ಲೈನ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಎರಡು ದಿನಗಳ ವಿಶೇಷ ಯಕ್ಷಗಾನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಪ್ರೇಕ್ಷಕರನ್ನು ರಂಜಿಸಿ, ಚಪ್ಪಾಳೆಗಿಟ್ಟಿಸುವ ಭರದಲ್ಲಿ ಕಲಾವಿದರು ರಾಜಕೀಯ ಸೇರಿದಂತೆ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸುವುದು, ಸಹ ಕಲಾವಿದರ ಮೇಲೆ ಮಾತಿನ ದಾಳಿಯ ಮೂಲಕ ಕುಂದುಂಟು ಮಾಡುವ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವ ಬಗ್ಗೆ ಅಕಾಡೆಮಿಗೂ ದೂರುಗಳು ಬಂದಿವೆ. ಆದರೆ ಇಂತಹ ಅತಿರೇಕದ ವರ್ತನೆಗಳನ್ನು ಸರಿ ಮಾಡುವ ಶಕ್ತಿ ಇರುವುದು ಯಕ್ಷಗಾನದ ಅಭಿಮಾನಿಗಳಿಗೆ (ಪ್ರೇಕ್ಷಕ) ಮಾತ್ರ. ಪ್ರೇಕ್ಷಕರು ಅಲ್ಲಿಯೇ ತಮ್ಮ ವಿರೋಧವನ್ನು ವ್ಯಕ್ತ ಪಡಿಸಿದರೆ ಇಂತಹ ಆಭಾಸಗಳು ಮುಂದೆ ನಡೆಯುವ ಸಾಧ್ಯತೆ ಇರುವುದಿಲ್ಲ ಎಂದವರು ಅಭಿಪ್ರಾಯಪಟ್ಟರು.
ಯಕ್ಷಗಾನ ಅಕಾಡೆಮಿಗೆ ಹಿರಿಯ ಸಾಧನೆ ಮಾಡಿದ, ಯಕ್ಷಗಾನಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ನೇಪಥ್ಯ ಸೇರಿರುವ ಹಿರಿಯ ಕಲಾವಿದರನ್ನು ಗುರುತಿಸಬೇಕು, ಗೌರವಿಸಬೇಕು ಎಂಬ ಸದಾಶಯವಿದೆ. ಯಕ್ಷಗಾನ ಈ ಮಟ್ಟದಲ್ಲಿ ಇಂದು ಜನಪ್ರಿಯತೆ ಉಳಿಸಿಕೊಳ್ಳಲು ಇಂಥ ಹಿರಿಯ ಚೇತನಗಳ ಸಮರ್ಪಣಾ ಕೆಲಸವೇ ಕಾರಣ. ಹೀಗಾಗಿ ಹಿರಿಯ ಕಲಾವಿದರನ್ನು ಮರೆಯುವ ಪ್ರಶ್ನೆಯೇ ಇಲ್ಲ. ಹೊಸತನ್ನು ಅಳವಡಿಸಿಕೊಳ್ಳುವ ಭರದಲ್ಲಿ ನಾವು ಕಲೆಯ ಪ್ರಾಚೀನ ಔನತ್ಯವನ್ನು ಎಂದೂ ಮರೆಯಬಾರದು ಎಂದು ಕಲಾವಿದರಿಗೆ ಅವರು ಕಿವಿಮಾತು ಹೇಳಿದರು.
ಯಕ್ಷಗಾನ ಕಲೆಯನ್ನು ಮಕ್ಕಳಿಗೆ ದಾಟಿಸಿದರೆ ಕಲೆಯ ಉಳಿವು, ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪ್ರಾರಂಭಗೊಂಡ ಶಾಲಾ ಮಕ್ಕಳಿಗೆ ಯಕ್ಷ ಶಿಕ್ಷಣ ಇಂದು ಬೆಳೆದು ಹೆಮ್ಮರ ವಾಗಿದೆ. ಉಡುಪಿ ಜಿಲ್ಲೆಯ 90ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳ 3,000ಕ್ಕೂ ಅಧಿಕ ವಿದ್ಯಾರ್ಥಿಗಳು ಯಕ್ಷಗಾನವನ್ನು ಕಲಿಯುತ್ತಿರುವುದು ಒಂದು ದೊಡ್ಡ ಸಾಧನೆಯೇ ಆಗಿದೆ ಎಂದರು.
ಇದೀಗ ರಂಗಭೂಮಿ ಉಡುಪಿ ಅಧ್ಯಕ್ಷನಾಗಿ, ರಂಗ ಶಿಕ್ಷಣವನ್ನು ಮಕ್ಕಳಿಗೆ ಹೇಳಿಕೊಡುವ ನಿಟ್ಟಿನಲ್ಲಿ ಯಕ್ಷ ಶಿಕ್ಷಣದಂತೆಯೇ ಶಾಲಾ ಕಾಲೇಜುಗಳಲ್ಲಿ ನಾಟಕ ತರಬೇತಿಗಳನ್ನು ಆರಂಭಿಸಲಾಗಿದೆ ಎಂದು ಅವರು ವಿವರಿಸಿದರು.
ಖ್ಯಾತ ವೈದ್ಯ ಹಾಗೂ ಕಲಾಪೋಷಕ ಡಾ.ಜಗದೀಶ್ ಶೆಟ್ಟಿ ಮಾತನಾ ಡಿದರು. ಸಂಪನ್ಮೂಲ ವ್ಯಕ್ತಿ ಅಜಿತ್ ಕಾರಂತ ಬೆಂಗಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯಕ್ಷಗಾನ ಗುರು ಅನಂತಪದ್ಮನಾಭ ಪಾಟಕ್ ಪುಣೆ, ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಪ್ರದೀಪ್ ಯಡಿಯಾಳ್, ಯಕ್ಷಗಾನ ಕಲಾವಿದ ಅರ್ಥಧಾರಿ ಸತೀಶ್ ಮೂಡುಬಗೆ, ಸಂಪತ್ ಕನ್ನಂತ, ಬಾಲಚಂದ್ರ ಭಟ್ ಉಪಸ್ಥಿತರಿದ್ದರು.
ಆನ್‌ಲೈನ್ ಮೂಲಕ ಯಕ್ಷಗಾನ ತರಬೇತಿ ಕಾರ್ಯಕ್ರಮ ಪ್ರಾರಂಭಿಸಿದ ಎನ್.ಜಿ.ಹೆಗಡೆ ಯಲ್ಲಾಪುರ ಕಾರ್ಯಕ್ರಮ ಸಂಯೋಜಿಸಿದರು.