ಪಿ.ಎಂ ಸೂರ್ಯ ಘರ್ ಯೋಜನೆ| ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜ.6: ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಯೋಜನೆಯಲ್ಲಿ 4447 ಮಂದಿ ಈಗಾಗಲೇ ನೊಂದಾಯಿಸಿಕೊಂಡಿದ್ದಾರೆ. 827 ಫಲಾನುಭವಿಗಳನ್ನು ಸರಬರಾಜು ಕಂಎನಿ ಆಯ್ಕೆ ಮಾಡಿಕೊಂಡಿದ್ದು, 378 ಮಂದಿಗೆ ಅವರ ಮನೆಯ ತಾರಸಿ ಮೇಲೆ ಸೋಲಾರ್ ಫ್ಯಾನಲ್ ಅಳವಡಿಸಿ ಸಂಪರ್ಕ ನೀಡಲಾಗಿದೆ ಎಂದು ಸಂಸದರ ಕಚೇರಿ ಪ್ರಕಟಣೆ ಮಾಹಿತಿ ನೀಡಿದೆ.
ಒಬ್ಬ ಫಲಾನುಭವಿಗೆ 300ಕ್ಕೂ ಮಿಕ್ಕಿ ಯೂನಿಟ್ ವಿದ್ಯುತ್ ಒದಗಿಸುವ ದೃಷ್ಟಿಯಿಂದ 2,06,000 ರೂ. ಸಾಲ ಸೌಲಭ್ಯ ವನ್ನು ರಾಷ್ಟ್ರೀಕೃತ ಬ್ಯಾಂಕ್ ಗಳ ಮೂಲಕ ಒದಗಿಸಲಾಗುತ್ತದೆ. ಆ ಪೈಕಿ 78,000ರೂ.ಗಳನ್ನು ಕೇಂದ್ರ ಸರಕಾರ ಸಬ್ಸಿಡಿ ರೂಪದಲ್ಲಿ ಒದಗಿಸುತ್ತಿದೆ. ಉಡುಪಿ ಜಿಲ್ಲೆಗೆ ಈಗಾಗಲೇ 299 ಫಲಾನುಭವಿಗಳ ಖಾತೆಗೆ ಸಬ್ಸಿಡಿ ಬಂದಿದೆ ಎಂದು ಸಂಸದರ ಹೇಳಿಕೆ ತಿಳಿಸಿದೆ.
ಹಾಲಿವರ್ಷ ಸೂರ್ಯ ಘರ್ ಯೋಜನೆಯ ಮೂಲಕ 1 ಕೋಟಿ ಕುಟುಂಬಗಳಿಗೆ ಸೋಲಾರ್ ವಿದ್ಯುತ್ ಅಳವಡಿಸುವ ಯೋಜನೆಯ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಬ್ಯಾಂಕ್ ಸಾಲ ಪಡೆದು ಕೇವಲ ಒಂದು ತಿಂಗಳೊಳಗೆ ಕೇಂದ್ರ ಸರ್ಕಾರದ ಮೂಲಕ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಒದಗಿಸಿದ್ದು ಈ ಯೋಜನೆಯ ವಿಶೇಷವಾಗಿದೆ ಎಂದವರು ಹೇಳಿದ್ದಾರೆ.