ಸಿರಿಧಾನ್ಯಯುಕ್ತ ಆಹಾರ ಸೇವನೆಯಿಂದ ದೈಹಿಕ ಸಮಸ್ಯೆಗಳಿಗೆ ಪರಿಹಾರ: ಪುತ್ತಿಗೆಶ್ರೀ ಸುಗುಣೇಂದ್ರ ತೀರ್ಥರು
ಸಿರಿಧಾನ್ಯ ಹಬ್ಬ ಉದ್ಘಾಟನೆ
ಉಡುಪಿ, ಜ.11: ಸಿರಿಧಾನ್ಯಯುಕ್ತ ಸಾವಯವ ಆಹಾರ ಉತ್ಪನ್ನಗಳ ನಿತ್ಯ ಸೇವನೆಯಿಂದ ಯಾವುದೇ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಆಹಾರ ಸೇವನೆಯಲ್ಲೂ ದೇಹದ ಆರೋಗ್ಯ ಕಾಳಜಿ ಇರಬೇಕು. ಹೀಗಾಗಿ ಸೇವಿಸುವ ಆಹಾರ ಪದ್ಧತಿಯಲ್ಲಿ ಎಚ್ಚರಿಕೆ ಅಗತ್ಯ ಎಂದು ಪರ್ಯಾಯ ಶ್ರೀಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕೃಷಿ ಇಲಾಖೆಗಳ ವತಿಯಿಂದ ‘ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2025’ರ ಪ್ರಯುಕ್ತ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಮತ್ತು ದೇಸಿ ತಳಿಗಳ ಸಂರಕ್ಷಣೆ ಹಾಗೂ ಉತ್ತೇಜನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿ ಮಾತನಾಡುತಿದ್ದರು.
ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸಮಸ್ಯೆಗಳಿಗೆ ನಮ್ಮ ಆಹಾರ ಪದ್ಧತಿಗಳೇ ಪ್ರಮುಖ ಕಾರಣವಾಗಿದೆ. ನಾವು ಈಗ ಸೇವಿಸುತ್ತಿರುವ ಆಹಾರದಲ್ಲಿ ಕೆಲವೊಂದು ಬದಲಾವಣೆ ಗಳನ್ನು ಮಾಡಿ ಸಿರಿಧಾನ್ಯಯುಕ್ತ ಸಾವಯವ ಆಹಾರ ಸೇವಿಸಿದರೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಬರಲು ಸಾಧ್ಯವಿಲ್ಲ ಎಂದು ಸ್ವಾಮೀಜಿ ನುಡಿದರು.
ಪಾರಂಪರಿಕ ಆಹಾರ ಪದ್ಧತಿಗಳಲ್ಲಿ ಇದ್ದ ಸತ್ವಗಳಿಂದ ನಮ್ಮ ಹಿರಿಯರು ಹೆಚ್ಚಿನ ಆರೋಗ್ಯ ಹಾಗೂ ಆಯಸ್ಸು ಹೊಂದಿ ದ್ದರು. ಪ್ರಸ್ತುತ ಕಲಬೆರಕೆ ಯಿಂದ ಕೂಡಿದ ಆಹಾರಗಳ ಸೇವನೆಯು ನಮ್ಮ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶ ನೀಡು ತ್ತಿಲ್ಲ. ಸಿರಿಧಾನ್ಯಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಪೂರಕವಾಗಿದೆ ಎಂದ ಅವರು, ಸಿರಿಧಾನ್ಯ ಬೆಳೆಯಲು ರೈತರಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಭಾರತದಲ್ಲಿ ಹಿಂದಿನಿಂದಲೂ ಸಿರಿಧಾನ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಗೋಧಿ ಇತ್ತೀಚೆಗೆ ಬಂದಿರುವ ಆಹಾರಧಾನ್ಯ. ಆದರೆ ನಾವು ನಮ್ಮ ಮೂಲ ಆಹಾರಧಾನ್ಯ ಗಳನ್ನು ಬಿಟ್ಟು ಗೋಧಿಗೆ ಒತ್ತು ನೀಡಿದೆವು. ಆಧುನಿಕತೆಯ ಜೊತೆಗೆ ಸಿರಿಧಾನ್ಯಗಳ ಕಡೆಗೂ ಒತ್ತು ನೀಡ ಬೇಕು. ಈ ನಿಟ್ಟಿನಲ್ಲಿ ಸರಕಾರವೂ ರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯ ಸಮ್ಮೇಳನಗಳನ್ನು ಹಮ್ಮಿಕೊಂಡಿದೆ ಎಂದು ವಿವರಿಸಿದರು.
ಆರೋಗ್ಯಕ್ಕೆ ಪೌಷ್ಠಿಕತೆ ನೀಡುವಂತಹ ಅನೇಕ ಅಂಶಗಳು ಸಿರಿಧಾನ್ಯದಲ್ಲಿವೆ. ಇದರ ಬಳಕೆಯಿಂದ ಯಾವುದೇ ಅನಾರೋಗ್ಯ ಸಮಸ್ಯೆಗಳು ಬರಲು ಸಾಧ್ಯವಿಲ್ಲ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದನ್ನು ಎಲ್ಲಾ ವಯೋಮಾನದವರೂ ಸೇವಿಸಬಹುದು. ನೀರಿನ ಮೂಲ ಇಲ್ಲದ ಕಡೆಗಳಲ್ಲಿಯೂ ಇದನ್ನು ಬೆಳೆದು ಬಳಕೆ ಮಾಡಬ ಹುದು. ಆಹಾರ ಸಹಿತ ವಿಶೇಷ ತಿಂಡಿ-ತಿನಿಸುಗಳಿಗೂ ಸಿರಿಧಾನ್ಯ ಬಳಕೆ ಮಾಡಿದರೆ ಆರೋಗ್ಯ ಸುಧಾರಣೆಯೂ ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು, ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷ ದಿನಕರ ಹೇರೂರು, ಕೃಷಿ ಇಲಾಖೆಯ ಜಿಲ್ಲಾ ನೋಡಲ್ ಅಧಿಕಾರಿ ಡಾ. ಎ.ಪದ್ಮಯ್ಯ ನಾಯ್ಕ್, ಸಹಾಯಕ ನಿರ್ದೇಶಕಿ ಪೂಜಾ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ವಿಜ್ಞಾನಿ ಡಾ. ಬಿ.ಧನಂಜಯ ಉಪಸ್ಥಿತರಿದ್ದರು.
ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ. ಸ್ವಾಗತಿಸಿ, ಉಪ ಕೃಷಿ ನಿರ್ದೇಶಕ ಚಂದ್ರಶೇಖರ ನಾಯ್ಕ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಸಿರಿಧಾನ್ಯ ಹಬ್ಬದಲ್ಲಿ ಭತ್ತದ ವಿವಿಧ ದೇಸೀಯ ತಳಿಗಳು, ಸಿರಿಧಾನ್ಯ ಗಳಿಂದ ತಯಾರಿಸಲಾದ ವಿವಿಧ ಆಹಾರ ಉತ್ಪನ್ನ ಗಳು, ಗೋವಿನ ಉಪ ಉತ್ಪನ್ನಗಳು, ಸಿರಿಧಾನ್ಯದಿಂದ ತಯಾರಿಸಲಾದ ಹಲ್ವಾ, ಚಿಕ್ಕಿ, ಸಿರಿಧಾನ್ಯಗಳ ಮಸಾಲೆ ಪದಾರ್ಥಗಳು ಸೇರಿದಂತೆ ಬಗೆಬಗೆಯ ಆಹಾರ ಉತ್ಪನ್ನಗಳು ಕಂಡುಬಂದವು.