ಉಡುಪಿ| ಪತ್ರಕರ್ತ ರವಿ ಹೆಗಡೆಗೆ ವಡ್ಡರ್ಸೆ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ
ಬ್ರಹ್ಮಾವರ, ಜ.11: ಸಮುದಾಯದ ಧ್ವನಿಯಾಗಿ, ಸಮಾಜದ ಸಾಧ್ಯತೆ ಗಳನ್ನು, ಬದುಕಿನ ವೈವಿಧ್ಯತೆಗಳ ಚಿತ್ರಣವಾಗಿ, ಸಾಮಾಜಿಕ ಜವಾಬ್ದಾರಿಯ ಎಚ್ಚರಿಕೆ ಗಂಟೆಯಾಗಿ ಪತ್ರಿಕೆಗಳು ಕೆಲಸ ಮಾಡಬೇಕು ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಹೇಳಿದ್ದಾರೆ.
ಬ್ರಹ್ಮಾವರದ ಬಂಟರ ಭವನದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘವು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ರಜತೋತ್ಸವ ಸಮಿತಿಯ ಸಹಯೋಗದೊಂದಿಗೆ ಶನಿವಾರ ಸಂಜೆ ಆಯೋಜಿ ಸಿದ್ದ ಸಮಾರಂಭದಲ್ಲಿ ‘ಕನ್ನಡಪ್ರಭ’ ಪತ್ರಿಕೆಯ ಸಂಪಾದಕ ರವಿ ಹೆಗಡೆ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತಿದ್ದರು.
ವಡ್ಡರ್ಸೆ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರವಿ ಹೆಗಡೆ, ಮಾಧ್ಯಮ ಕ್ಷೇತ್ರ ಇಂದು ಸಂಕಷ್ಟದಲ್ಲಿದೆ. ಮಾಧ್ಯಮ ಉಳಿಯಬೇಕಾದರೆ ಓದುಗರ ಸಂಖ್ಯೆ ಹೆಚ್ಚಾಗಬೇಕು. ಅವರು ಪತ್ರಿಕೆಗಳನ್ನು ಕೊಂಡು ಓದಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಪತ್ರಿಕೋದ್ಯಮ ಇಂದು ಸಂದಿಗ್ಧ ಸ್ಥಿತಿಯಲ್ಲಿದೆ. ಪ್ರಾಮಾಣಿಕ ಸುದ್ದಿ ಮತ್ತು ಪ್ರಾಮಾಣಿಕ, ನಿರ್ಭೀತ ಪತ್ರಿಕೋದ್ಯಮ ಇಂದಿನ ತುರ್ತು ಅಗತ್ಯವಾಗಿದೆ. ಇಂದಿನ ಪತ್ರಿಕೆ ಮತ್ತು ಪತ್ರಕರ್ತರಿಗೆ ಅತಿಯಾಗಿ ವಿಜೃಂಭಿಸದೇ ವಾಸ್ತವವನ್ನು ಬಿಂಬಿಸುವ ಪತ್ರಕರ್ತರನ್ನಾಗಿ ಮಾಡಲು ವಡ್ಡರ್ಸೆ ಮಾದರಿಯೊಂದನ್ನು ಹಾಕಿ ಕೊಟ್ಟಿದ್ದಾರೆ ಎಂದು ಹೇಳಿದರು.
ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ ಗಾಣಿಗ ಅಚ್ಲಾಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಘದ ಮಾಜಿ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಅವರನ್ನು ಅಭಿನಂದಿಸಲಾಯಿತು.
ಬೆಂಗಳೂರಿನ ಹಿರಿಯ ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಹಾಗೂ ಕುಂದಾಪುರದ ಕೆ.ಸಿ.ರಾಜೇಶ ಅಭಿನಂದನಾ ಭಾಷಣ ಮಾಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶಪಾಲ್ ಸುವರ್ಣ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮೈಕಲ್ ರಾಡ್ರಿಗಸ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಬ್ರಹ್ಮಾವರ ಬಂಟರ ಭವನದ ಸಂಚಾಲಕ ಭುಜಂಗ ಶೆಟ್ಟಿ ಉಪಸ್ಥಿತರಿದ್ದರು.
ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಸ್ವಾಗತಿಸಿದರೆ, ಕಾರ್ಯಕ್ರಮದ ಸಂಚಾಲಕ ವಸಂತ ಗಿಳಿಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಹರೀಶ ಕಿರಣ್ ತುಂಗ ವಂದಿಸಿದರು. ಉಪಾಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ವಡ್ಡರ್ಸೆಯವರ ‘ಮುಂಗಾರು’ ಸಂಚಿಕೆಗಳ ಪ್ರದರ್ಶನ
1985ರಲ್ಲಿ ಮಂಗಳೂರಿನಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರು ಪ್ರಾರಂಭಿಸಿ, ಪತ್ರಿಕಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿದ ‘ಮುಂಗಾರು’ ಪತ್ರಿಕೆಗಳ ಸಂಚಿಕೆಗಳ ಪ್ರದರ್ಶನ ಇಂದು ಎಲ್ಲರ ಗಮನ ಸೆಳೆದು ಅಂದಿನ ಪತ್ರಿಕೆಗಳ ಸವಿನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದವು.
ಉಡುಪಿ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಜಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಶಾಂತ ನೀಲಾವರ, ವಿದ್ಯಾರ್ಥಿ ವಿಘ್ಙೇಶ್ ಶೆಣೈ ಮತ್ತು ಇತರೆ ವಿದ್ಯಾರ್ಥಿಗಳು ತಮ್ಮ ಸಂಗ್ರಹದ ‘ಮುಂಗಾರು’ ಪತ್ರಿಕೆಗಳ ಹಳೆ ಸಂಚಿಕೆಗಳನ್ನು ಇಲ್ಲಿ ಪ್ರದರ್ಶಿಸಿದರು.