ಪರಸ್ಪರಾವಲಂಬನೆ ಹಳ್ಳಿಗಳ ಸ್ವಾವಲಂಬನೆಗೆ ದಾರಿ: ಡಾ.ಪ್ರಕಾಶ್ ಭಟ್
‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕುರಿತು ಕೃತಿಕಾರರ ಉಪನ್ಯಾಸ
ಮಣಿಪಾಲ: ಜಾತಿ, ಮತ, ಧರ್ಮವನ್ನು ಮೀರಿದ ಪರಸ್ಪರಾವಲಂಬನೆಯೇ ಹಳ್ಳಿಗಳ ಸ್ವಾವಲಂಬನೆಗೆ ದಾರಿ ಎಂದು ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಚಿಂತಕ ಹಾಗೂ ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಕೃತಿಯ ಲೇಖಕ ಧಾರವಾಡದ ಡಾ.ಪ್ರಕಾಶ್ ಭಟ್ ಅಭಿ ಪ್ರಾಯ ಪಟ್ಟಿದ್ದಾರೆ.
ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್) ಮತ್ತು ಬಹುರೂಪಿ ಫೌಂಡೇಶನ್ ಬೆಂಗಳೂರು ಇವರ ಜಂಟಿ ಆಶ್ರಯದಲ್ಲಿ ಗಾಂಧಿಯನ್ ಸೆಂಟರ್ನ ಸರ್ವೋದಯ ಸಭಾಂಗಣದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನಿಯಾದ ಕಳೆದ ಹಲವಾರು ವರ್ಷಗಳಿಂದ ಹಳ್ಳಿಗಳನ್ನು ಕಟ್ಟುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿ ೬೭ ವರ್ಷ ಪ್ರಾಯದ ಡಾ. ಪ್ರಕಾಶ್ ಭಟ್ ಮಾತನಾಡುತಿದ್ದರು.
ಗಾಂಧೀಜಿಯವರ ಶಿಷ್ಯರಾಗಿದ್ದ ಡಾ.ಮಣಿಭಾಯಿ ದೇಸಾಯಿ ಅವರ ಪ್ರೇರಣೆಯಿಂದ ಗ್ರಾಮಾಭಿವೃದ್ಧಿಯ ಕನಸು ಕಂಡು, ದಶಕಗಳ ಕಾಲ ಅದರಲ್ಲಿ ತನ್ನನ್ನು ತೊಡಗಿಸಿಕೊಂಡು ಹಳ್ಳಿಗಳ ಸುಸ್ಥಿರ ಅಭಿವೃದ್ಧಿಗೆ ಮಾದರಿ ಯೊಂದನ್ನು ಕಲ್ಪಿಸಿಕೊಟ್ಟ ಡಾ.ಪ್ರಕಾಶ್ ಭಟ್ ತನ್ನ ಕೃತಿಯ ಕುರಿತು ಹಳ್ಳಿಯನ್ನು ಕಟ್ಟುವ ಕಷ್ಟಸುಖಗಳನ್ನು ಕೇಳುಗರೊಂದಿಗೆ ಹಂಚಿಕೊಂಡರು.
ದೇಶದಲ್ಲಿ ಇಂದು ನಿರುದ್ಯೋಗಕ್ಕಿಂತಲೂ, ಸರಿಯಾದ ಉದ್ಯೋಗವಿಲ್ಲ ದಿರುವುದು (ಅಂಡರ್ ಎಪ್ಲಾಯಿಮೆಂಟ್) ದೊಡ್ಡ ಸಮಸ್ಯೆಯಾಗಿದೆ ಎಂದು ಹಳ್ಳಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಭಿಪ್ರಾಯಪಟ್ಟ ಡಾ.ಭಟ್, ಜಮೀನು ಇಲ್ಲದವರು ನಗರ ದಲ್ಲಿ ಸಿಕ್ಕಿದ ಉದ್ಯೋಗ ಮಾಡಲು ತೆರಳುತ್ತಾರೆ. ಆದರೆ ಒಂದೆರಡು ಎಕರೆ ಭೂಮಿ ಇರುವವರು ನಿಜವಾಗಿ ಸಮಸ್ಯೆಗೆ ಸಿಲುಕಿಕೊಳ್ಳು ತ್ತಾರೆ. ಒಂದೆಡೆ ಅದನ್ನು ಬಿಟ್ಟು ಹೋಗುವಂತೆಯೂ ಇಲ್ಲ, ಅದನ್ನು ನಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾ ಗುವುದಿಲ್ಲ. ಇಂಥವರಿಗೆ ನಮ್ಮ ವಿವಿಧ ಯೋಜನೆಗಳ ಮೂಲಕ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ನೆರವಾದೆವು ಎಂದರು.
ಭಾರತದ ಹಳ್ಳಿಗಳಲ್ಲಿ ಹಿಂದೆ ಇದ್ದ ಆದಾಯ ತರುವ -ನೇಕಾರಿಕೆ, ಕಂಬಾರಿಕೆ, ಬುಟ್ಟಿ ನೆಯ್ಯುವುದು ಇತ್ಯಾದಿ- ವೃತ್ತಿ ಸಂಬಂಧಿತ ಗೃಹ ಉದ್ಯೋಗಗಳೆಲ್ಲಾ ಇಂದು ಸತ್ತಿವೆ ಅಥವಾ ಸಾಯುತ್ತಿವೆ. ಇಂಥ ಸಂದರ್ಭದಲ್ಲಿ ಧಾರವಾಡ ಹಾಗೂ ಉತ್ತರ ಕನ್ನಡದ ಹಳ್ಳಿಗಳನ್ನು ತಮ್ಮ ಯೋಜನೆಗೆ ಆಯ್ಕೆ ಮಾಡಿಕೊಂಡು ಕಾರ್ಯೋನ್ಮುಖವಾದೆವು ಎಂದವರು ತಮ್ಮ ಹಳ್ಳಿಗಳ ಅಭಿವೃದ್ಧಿಯ ತಮ್ಮ ಯೋಜನೆಯನ್ನು ವಿವರಿಸಿದರು.
ಹಳ್ಳಿಗಳನ್ನು ಬ್ಲಾಕ್ಗಳಾಗಿ ಮಾಡಿಕೊಂಡು, ಪ್ರತಿ ಬ್ಲಾಕ್ಗಳಲ್ಲಿ ನೂರು ಕುಟುಂಬಗಳೊಂದಿಗೆ ಕೆಲಸ ಮಾಡಲು 10 ಮಂದಿಯ ತಂಡ ರಚಿಸಿ, ಹಳ್ಳಿಯಲ್ಲಿ ಅವರೊಂದಿಗೆ ಇದ್ದು ಅವರ ಪ್ರೀತಿ, ವಿಶ್ವಾಸ ಗಳಿಸಿ ಕೆಲಸ ಮಾಡಿದೆವು. ಇದಕ್ಕಾಗಿ ನಾವು ಅರೆ ಮಲೆನಾಡಿನ ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡಿದ್ದೆವು ಎಂದರು.
ಸ್ವಸಹಾಯ ಸಂಘದ ಮಾದರಿಯಲ್ಲಿ ಮಾಡಿಕೊಂಡು ಮೈಕ್ರೋಫೈನಾನ್ಸ್ ಮೂಲಕ ಅವರು ತಮ್ಮ ಆದಾಯವನ್ನು ಸುಸ್ಥಿರವಾಗಿ ಹೆಚ್ಚಿಸಿಕೊಳ್ಳಲು ಅಭವೃದ್ಧಿ ಕಾರ್ಯಕರ್ತರಾಗಿ ನಾವು ನೆರವು ನೀಡಿದೆವು. ಹಳ್ಳಿಗಳ ಬಡಜನರ ಸಾಮರ್ಥ್ಯ ವನ್ನು ಅವರಿಗೆ ಮನನ ಮಾಡಿಕೊಟ್ಟು ಅವರ ಬದುಕನ್ನು ಹಸನುಗೊಳಿಸುವ ದಾರಿ ತೋರಿಸಿಕೊಟ್ಟೆವು ಎಂದರು.
ನಾವು ಹಳ್ಳಿಗಳಲ್ಲಿ ‘ಕ್ಲೀನ್ ಕಿಚನ್’ ಯೋಜನೆಯನ್ನು ಜಾರಿಗೊಳಿಸಿದಾಗ ಜನ ಮೊದಲು ಒಪ್ಪಲಿಲ್ಲ. ಅವರದೇ ಭಾಷೆಯಲ್ಲಿ ಮಾತನಾಡಿ, ಒಲಿಸಿಕೊಂಡು ಮನವರಿಕೆ ಮಾಡಿದಾಗ ನಾವು ಆಶ್ಚರ್ಯ ಪಡುವಂತೆ ಅವರು ಸಹಕರಿಸಿದರು ಎಂದು ಡಾ.ಭಟ್ ವಿವರಿಸಿದರು.
ಬೇಕಾಗಿದೆ ಸಾಮಾಜಿಕ ಒಳನೋಟ: ನಮ್ಮ ಯೋಜನೆಯ ೯ ವರ್ಷಗಳಲ್ಲಿ ನಾವು ಸುಮಾರು ನಾಲ್ಕು ಕೋಟಿ ರೂ.ಗಳನ್ನು ಖರ್ಚು ಮಾಡಿರಬೇಕು. ಇಂದು ಹಳ್ಳಿಗಳ ಅಭಿವೃದ್ಧಿಗೆ ಬೇಕಾಗಿರುವುದು ಹಣವಲ್ಲ. ಸಾಮಾಜಿಕ ಒಳನೋಟ ಬೇಕಾಗಿದೆ. ಯಾರಿಗೆ ಏನು ಬೇಕು ಎಂಬುದನ್ನು ಅರ್ಥ ಮಾಡಿಕೊಂಡು ಅದನ್ನು ಕಾರ್ಯದಲ್ಲಿ ಅಳವಡಿಸಿಕೊಂಡಾಗ ಹಳ್ಳಿಗರನ್ನು ತಲುಪುತ್ತದೆ ಎಂದು ಡಾ.ಪ್ರಕಾಶ್ ಭಟ್ ತಿಳಿಸಿದರು.
ನಾನು ಹಳ್ಳಿಗಳಲ್ಲಿ ಕೆಲಸ ಪ್ರಾರಂಭಿಸಿದಾಗ ಯಾರದೇ ಮಾದರಿಯನ್ನು ಅನುಸರಿಸದೇ, ನನ್ನದೇ ಆದ ರೀತಿಯಲ್ಲಿ ಹಳ್ಳಿ ಗರನ್ನು ಅರ್ಥಮಾಡಿಕೊಂಡು ಅವರ ಪ್ರೀತಿ ವಿಶ್ವಾಸಗಳಿಸಿ ಕೆಲಸ ಮಾಡಿದೆ. ಅವರ ಸಮಸ್ಯೆಗಳಿಗೆ ಸ್ಪಂಧಿಸಿದೆ. ಅವರ ನಡುವೆಯೇ ಬದುಕಿ, ನಾವು ಹೊರಗಿನವರಲ್ಲ ಎಂದು ಅರಿವು ಮೂಡಿಸಿ ಅವರ ವಿಶ್ವಾಸ ಸಂಪಾದಿಸಿದೆ ಎಂದು ಡಾ.ಪ್ರಕಾಶ್ ಭಟ್ ತಿಳಿಸಿದರು.
‘ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ’ ಪುಸ್ತಕದ ಪ್ರಕಾಶಕ ಮತ್ತು ಲೇಖಕ ಜಿ.ಎನ್.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನ ಮುಖ್ಯಸ್ಥ ಡಾ.ವರದೇಶ ಹಿರೇಗಂಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.