ಬಾಲಮುರಳಿ ಬಣ್ಣದ ಲೋಕದಿಂದ ಚಿಣ್ಣರ ಬಣ್ಣದ ಹಬ್ಬ
ಉಡುಪಿ, ಜ.14: ಕನ್ನರ್ಪಾಡಿಯ ಬಾಲಮುರಳಿ ಬಣ್ಣದ ಲೋಕದ ಹೈಸ್ಕೂಲ್‌ವರೆಗಿನ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ ‘ಚಿಣ್ಣರ ಬಣ್ಣದ ಹಬ್ಬ-2025’ನ್ನು ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ತಮ್ಮ ಮಗಳು ಪಾವನಿಯ ಹತ್ತನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯ 1ರಿಂದ 9ನೇ ತರಗತಿವರೆಗೆ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಈ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ದರು.
ಉಡುಪಿ ಜಿಲ್ಲೆಯಾದ್ಯಂತದಿಂದ ಆಗಮಿಸಿದ ಸುಮಾರು 300 ಮಂದಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ತರಗತಿ ವಾರು ಪ್ರಥಮ (2000ರೂ.) ದ್ವಿತೀಯ (1500 ರೂ.), ತೃತೀಯ (1000 ರೂ.) ಮತ್ತು ಎರಡು ಸಮಾಧಾನಕರ (ತಲಾ 500ರೂ.) ಸೇರಿದಂತೆ ಒಟ್ಟು 45 ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಮತ್ತು ಪುಸ್ತಕ ಸ್ಮರಣಿಕೆಯನ್ನು ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಖ್ಯಾತ ವೈದ್ಯರಾದ ಡಾ.ಜೆ.ಎನ್. ಭಟ್ ಮತ್ತು ಡಾ.ವಿರೂಪಾಕ್ಷ ದೇವರಮನೆ ವಿದ್ಯಾರ್ಥಿ ಪೋಷಕರಿಗೆ ಆರೋಗ್ಯ ಮತ್ತು ಮಕ್ಕಳನ್ನು ಬೆಳೆಸುವ ಕುರಿತು ಉಪಯುಕ್ತ ಸಲಹೆ- ಸೂಚನೆಗಳನ್ನು ನೀಡಿ ದರು. ರಮೇಶ್ ರಾವ್, ಎಚ್. ಜನಾರ್ದನ್ ರಾವ್, ನಟರಾಜ ಉಪಾಧ್ಯ, ಗಾಯತ್ರಿ ನಾಯಕ್ ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಟಿ. ಶ್ರೀಧರ್ ರಾವ್ ದಂಪತಿ ವಿಜೇತ ಮಕ್ಕಳಿಗೆ ವಿತರಿಸಿದರು. ವೇದಿಕೆಯಲ್ಲಿ ಕೆ. ಬಾಲಕೃಷ್ಣ ರಾವ್, ಗೋಪಿಕೃಷ್ಣ ರಾವ್, ಯು. ಎಸ್. ರಾಜಗೋಪಾಲ ಆಚಾರ್ಯ, ಶ್ರೀಮತಿ ಬಿ. ಜಿ. ಶಶಿರೇಖಾ, ಶ್ರೀಮತಿ ಹೆಲೆನ್ ಸಾಲಿನ್ಸ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.