ಉಚ್ಚಿಲ| ಅಪಘಾತಕ್ಕೆ ಮತ್ತೊಂದು ಬಲಿ: ಸ್ಥಳೀಯರಿಂದ ಪ್ರತಿಭಟನೆಯ ಎಚ್ಚರಿಕೆ
ನಿಲ್ಲದ ಅಪಘಾತ, ತಿಂಗಳಲ್ಲಿ 6 ಮಂದಿ ಮೃತ್ಯು
(ಮಂಜಪ್ಪ)
ಪಡುಬಿದ್ರಿ, ಜ.14: ಅವೈಜ್ಞಾನಿಕ ಕಾಮಗಾರಿಯ ಪರಿಣಾಮ ಅಪಘಾತ ವಲಯವಾಗಿ ಮಾರ್ಪಟ್ಟಿರುವ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾವಿನ ಸರಣಿ ಮುಂದುವರೆದಿದೆ. ಇಂದು ಮತ್ತೊಂದು ಜೀವ ಅಪಘಾತಕ್ಕೆ ಬಲಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಉಚ್ಚಿಲದಲ್ಲಿ ಅಪಘಾತದಿಂದ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ.
ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲ ಮಸೀದಿ ಬಳಿ ಮಂಗಳವಾರ ಮುಂಜಾನೆ ವೇಳೆ ಅಪರಿಚಿತ ವಾಹನ ವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಾಚಾರಿ ಕೂಲಿ ಕಾರ್ಮಿಕ ಹಾವೇರಿ ಹಾನಗಲ್ ಮೂಲದ ಮಂಜಪ್ಪ ಕರಿಭೀಮಣ್ಣನವರ್(54) ಎಂಬವರು ಮೃತಪಟ್ಟಿದ್ದಾರೆ.
ಬೆಳಿಗ್ಗೆ 4 ಗಂಟೆಯಿಂದ 6.15ರ ಮಧ್ಯಾವಧಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಅಪರಿಚಿತ ವಾಹನವು ರಸ್ತೆ ಬದಿ ನಿಂತು ಕೊಂಡಿದ್ದ ಮಂಜಪ್ಪಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ. ಅಪಘಾತ ಪಡಿಸಿದ ಚಾಲಕ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.
ಘಟನಾ ಸ್ಥಳದಲ್ಲಿ ಬೀದಿದೀಪ ಇಲ್ಲದೆ ಕತ್ತಲು ಆವರಿಸಿದ್ದು, ರಸ್ತೆ ಬದಿ ಬಿದ್ದ ಮೃತದೇಹವು ಇತರ ವಾಹನಗಳಿಗೆ ಗೋಚರ ಆಗುತ್ತಿರಲಿಲ್ಲ. ಇದರಿಂದ ಹಲವು ವಾಹನಗಳು ಮೃತದೇಹದ ಮೇಲೆ ಚಲಿಸಿದ್ದು, ಇದರಿಂದ ಮೃತದೇಹ ಗುರುತು ಹಿಡಿಯ ಲಾರದಷ್ಟು ಛಿದ್ರಗೊಂಡಿದೆ. ಬಳಿಕ ಮೃತರ ಬಳಿಯಿದ್ದ ಚೀಟಿಯಲ್ಲಿನ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಂಬಂಧಿಕರ ಮೂಲಕ ಗುರುತು ಪತ್ತೆ ಹಚ್ಚಲಾಯಿತು.
ಹೋರಾಟ ಸಮಿತಿ ರಚನೆ: ಬೆಳೆಯುತ್ತಿರುವ ಉಚ್ಚಿಲ ಪೇಟೆಯಲ್ಲಿಯೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ವಾಹನಗಳ ದಟ್ಟಣೆ ಹಾಗೂ ಅತೀವೇಗದ ಚಾಲನೆಯಿಂದ ಇಲ್ಲಿ ಹಲವು ಜೀವಗಳು ಬಲಿಯಾಗಿವೆ. ಈ ಹಿನ್ನೆಲೆಯಲ್ಲಿ ವಿವಿಧ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಸ್ಥಳೀಯರ ಹೋರಾಟ ಸಮಿತಿ ಯನ್ನು ರಚಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಒಟ್ಟು ಸಂಭವಿಸಿದ ಅಪಘಾತಗಳಲ್ಲಿ ಒಂಭತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಆರು ಮಂದಿಯು ಬಡಾ ಗ್ರಾಪಂ ವ್ಯಾಪ್ತಿಯ ಎರ್ಮಾಳು, ಉಚ್ಚಿಲ, ಮೂಳೂರಿನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಉಚ್ಚಿಲ ಪೇಟೆಯಲ್ಲಿ ಹೆದ್ದಾರಿ ದಾಟಲು ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದು, ಬ್ಯಾರಿಕೇಡ್ ಅಳವಡಿಸದೇ ಇರುವುದ ರಿಂದ ವಾಹನಗಳ ವೇಗಕ್ಕೆ ಮಿತಿ ಇಲ್ಲದೇ ಇರುವುದು ಮತ್ತು ರಾತ್ರಿ ಬೀದಿದೀಪಗಳು ಉರಿಯದೇ ಇರುವುದು ಹಾಗೂ ಮಳೆ ನೀರು ಸಮರ್ಪಕವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೇ ಇರುವುದು ಅಪಘಾತಗಳಿಗೆ ಪ್ರಮುಖ ಕಾರಣ ಎಂಬುದು ಸ್ಥಳೀಯರ ಆರೋಪ.
ಪೊಲೀಸ್ ಠಾಣೆಗೆ ದೂರು: ಉಚ್ಚಿಲದಲ್ಲಿ ನಿರಂತರ ಸಂಭವಿಸುತ್ತಿರುವ ಅಪಘಾತದ ಬಗ್ಗೆ ಸಮಿತಿಯವರು ಪಡುಬಿದ್ರಿ ಠಾಣೆಗೆ ತೆರಳಿ ಠಾಣಾಧಿಕಾರಿ ಪ್ರಸನ್ನ ಎಂ.ಎಸ್. ಅವರಿಗೆ ದೂರು ಸಲ್ಲಿಸಿದರು.
ಘಟನೆಗೆ ಹೆದ್ದಾರಿ ಇಲಾಖೆಯೇ ಕಾರಣವಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದರು. ರಾಷ್ಟ್ರೀಯ ಹೆದ್ದಾರಿ 66ರ ಯೋಜನಾ ನಿರ್ದೇಶಕರು ಮತ್ತು ಟೋಲ್ ಮ್ಯಾನೇಜರ್ ಮತ್ತು ಢಿಕ್ಕಿ ಹೊಡೆದ ವಾಹನದ ಚಾಲಕನ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜುದ್ದೀನ್, ಬಡಾ ಗ್ರಾಪಂ ಅಧ್ಯಕ್ಷ ಶಿವಕುಮಾರ್ ಮೆಂಡನ್, ತಾಪಂ ಮಾಜಿ ಸದಸ್ಯ ಯು.ಸಿ.ಶೇಖಬ್ಬ, ಸಮಿತಿಯ ಸದಸ್ಯರಾದ ವೇದವ್ಯಾಸ ಬಂಗೇರ, ಧೀರಜ್ ಹುಸೇನ್, ಜಲಾಲ್, ಸುಕುಮಾರ್, ರಜಾಕ್, ಆಸಿಫ್, ಮಜೀದ್, ವಿಜಯ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
‘ಉಚ್ಚಿಲದಲ್ಲಿ ಹೆದ್ದಾರಿ ಇಲಾಖೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದೆ. ಇದರಿಂದ ಇಲ್ಲಿ ಹಲವು ಮಂದಿ ಜೀವ ಕಳೆದುಕೊಂಡಿದ್ದಾರೆ. ಆದುದರಿಂದ ಬಡಾ ಗ್ರಾಮ ವ್ಯಾಪ್ತಿಯಲ್ಲಿ ತಕ್ಷಣ ಬೀದಿದೀಪಗಳನ್ನು ಅಳವಡಿಸಬೇಕು. ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ತೆರಳುವಲ್ಲಿ ಸೂಕ್ತ ಭದ್ರತೆ ಕಲ್ಪಿಸಬೇಕು. ಈ ಬೇಡಿಕೆ ಈಡೇರಿಸದಿದ್ದರೆ ಜ.20 ಬಳಿಕ ಬಡಾ-ಉಚ್ಚಿಲದಲ್ಲಿ ಬಂದ್ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’
-ಸಿರಾಜುದ್ದೀನ್, ಅಧ್ಯಕ್ಷರು, ಹೆದ್ದಾರಿ ಹೋರಾಟ ಸಮಿತಿ, ಉಚ್ಚಿಲ
ಉಚ್ಚಿಲದಲ್ಲಿ ನಿರಂತರ ಅಪಘಾತ ಸಂಭವಿಸುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಮೇಲ್ಸೇತುವೆ ನಿರ್ಮಿಸುವ ಬಗ್ಗೆ ರಸ್ತೆ ಸುರಕ್ಷ ಪ್ರಾಧಿಕಾರಯಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಹೇಳಿದ್ದೇವೆ. ಮುಂದೆ ಮತ್ತೆ ಸಭೆ ಕರೆದು ಉಚ್ಚಿಲದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚನೆ ನೀಡಲಾಗುವುದು’
-ಡಾ.ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ, ಉಡುಪಿ