ಕುಂದಾಪುರ ರಿಂಗ್ ರೋಡ್ ಕಾಮಗಾರಿ ವೇಳೆ ಪಂಚಗಂಗಾವಳಿ ನದಿಗೆ ಮಗುಚಿದ ಟಿಪ್ಪರ್
ಕುಂದಾಪುರ: ಕುಂದಾಪುರದ ಪಂಚಗಂಗಾವಳಿ ಹೊಂದಿಕೊಂಡಂತೆ ಆರಂಭಿಸಿರುವ ರಿಂಗ್ ರೋಡ್ ವಿಸ್ತರಣಾ ಕಾಮಗಾರಿಗೆ ಬಂಡೆ ಕಲ್ಲುಗಳನ್ನು ಸುರಿಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ನದಿಗೆ ಮಗುಚಿಬಿದ್ದ ಘಟನೆ ಕುಂದಾಪುರ ಖಾರ್ವಿ ಕೇರಿಯ ಪಂಚಗಂಗಾವಳಿ ನದಿಯಲ್ಲಿ ನಡೆದಿದೆ.
ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆಂದು ತಿಳಿದುಬಂದಿದೆ.
ಘಟನೆ ನಡೆಯುತ್ತಲೆ ಇತರೆ ಕೆಲಸಗಾರರು ಹಾಗೂ ಸಾರ್ವಜನಿಕರು ಒಗ್ಗೂಡಿ ಚಾಲಕನನ್ನು ರಕ್ಷಿಸಿ ಟಿಪ್ಪರ್ ಮೇಲಕ್ಕೆತ್ತಲು ಸಹಕರಿಸಿದರು. ಹರಸಾಹಸಪಟ್ಟು ಹಿಟಾಚಿ ಮೂಲಕ ಟಿಪ್ಪರ್ ಮೇಲಕ್ಕೆತ್ತಲಾಯಿತು.
ಕುಂದಾಪುರ ರಿಂಗ್ ರಸ್ತೆ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಇಲ್ಲಿನ ಪಿಡಬ್ಲ್ಯೂಡಿ ನಿರೀಕ್ಷಣಾ ಮಂದಿರದಿಂದ (ಐಬಿ) ಕೆಳ ಭಾಗ ಹೊಳೆ ಸಮೀಪದಲ್ಲಿ ನಡೆಯುತ್ತಿದ್ದ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ. ಖಾಸಗಿ ಕನ್ಸ್ಟ್ರಕ್ಷನ್ ಕಂಪೆನಿಯೊಂದು ಇಲ್ಲಿ ಕಾಮಗಾರಿ ನಡೆಸುತ್ತಿದೆ.
Next Story