ಅಥ್ಲೆಟಿಕ್ ಸ್ಪರ್ಧೆಗೆ ಸಜುಗೊಳ್ಳುತ್ತಿದೆ ಉಡುಪಿ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣ
ಕರ್ನಾಟಕ ಕ್ರೀಡಾಕೂಟ-2025ಕ್ಕೆ ಕ್ಷಣಗಣನೆ ಆರಂಭ
ಉಡುಪಿ, ಜ.15: ಮೂರನೇ ಕರ್ನಾಟಕ ಕ್ರೀಡಾಕೂಟಕ್ಕೆ ಕ್ಷಣಗಣನೆ ಪ್ರಾರಂಭಗೊಂಡಿರುವಂತೆ ಉಡುಪಿ ನಗರದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣ ಕ್ರೀಡಾಕೂಟದ ಪ್ರಧಾನ ಆಕರ್ಷಣೆಯಾದ ಅಥ್ಲೆಟಿಕ್ ಸ್ಪರ್ಧೆಗಳಿಗಾಗಿ ಸನ್ನದ್ದಗೊಳ್ಳುತ್ತಿದೆ.
ಒಲಿಂಪಿಕ್ಸ್ ಕ್ರೀಡಾಕೂಟದ ಮಾದರಿಯಲ್ಲಿ ನಡೆಯುವ ಕರ್ನಾಟಕ ಕ್ರೀಡಾಕೂಟ-2025 ಈ ಬಾರಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜ.17ರಿಂದ 23ರವರೆಗೆ ನಡೆಯಲಿದೆ. ಕ್ರೀಡಾಕೂಟದಲ್ಲಿ ಒಟ್ಟು 25 ಸ್ಪರ್ಧೆಗಳಿದ್ದು, ಇವುಗಳಲ್ಲಿ 12 ಮಂಗಳೂರಿನಲ್ಲೂ, 11 ಉಡುಪಿಯಲ್ಲೂ ಉಳಿದ ಎರಡು ಬೆಂಗಳೂರಿನಲ್ಲೂ ನಡೆಯಲಿದೆ.
ಕ್ರೀಡಾಕೂಟಕ್ಕಾಗಿ ಉಡುಪಿಯ ಜಿಲ್ಲಾ ಕ್ರೀಡಾಂಗಣದ ಸಿಂಥೆಟಿಕ್ ಟ್ರ್ಯಾಕ್‌ಗಳನ್ನು ಸುಮಾರು 30 ಲಕ್ಷ ರೂ.ವ ವೆಚ್ಚದಲ್ಲಿ ಪುನರ್ ಹಾಸಲಾಗಿದೆ. 2013ರಲ್ಲಿ ಉಡುಪಿಯ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್‌ನ್ನು ಅಳವಡಿಸ ಲಾಗಿದ್ದು, ಅದರ ಕಾಲಾವಧಿ 10 ವರ್ಷಗಳಾಗಿವೆ. ಇದೀಗ 10 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಈ ಕ್ರೀಡಾಕೂಟಕ್ಕಾಗಿಯೇ ಅದನ್ನು ಮತ್ತೆ ಹೊಸದಾಗಿ ಹಾಸಲಾಗಿದೆ.
ಹೊಸದಾಗಿ ಹಾಸಲಾದ ಸಿಂಥೆಟಿಕ್ ನೆಲಹಾಸು ಹಾಗೂ ಟ್ರ್ಯಾಕ್‌ಗೆ ಪೇಟಿಂಗ್ ಕೊಡುವ ಕಾರ್ಯವೂ ಭರದಿಂದ ನಡೆಯುತ್ತಿದೆ. ಸಾಕಷ್ಟು ಮಂದಿ ಕಾರ್ಮಿಕರು ಈ ಕಾರ್ಯದಲ್ಲಿ ನಿರತರಾಗಿದ್ದ ದೃಶ್ಯ ಇಂದು ಕಂಡುಬಂದಿದೆ. ನಾಳೆ ಸಂಜೆಯೊಳಗೆ ಉನ್ನತೀಕರಣಗೊಂಡ ಸಿಂಥೆಟಿಕ್ ಟ್ರ್ಯಾಕ್ ಕ್ರೀಡಾಕೂಟಕ್ಕೆ ಸರ್ವಸನ್ನದ್ಧಗೊಳ್ಳಲಿದೆ ಎಂದು ಕ್ರೀಡಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಾದ್ಯಂತದಿಂದ ಬರುವ 1300ಕ್ಕೂ ಅಧಿಕ ವಿವಿಧ ಸ್ಪರ್ದೆಗಳು ಕ್ರೀಡಾಪಟುಗಳು ಉಡುಪಿಯಲ್ಲಿ ನಡೆಯುವ 11 ಕ್ರೀಡಾಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರಿಗಾಗಿ ಮೈದಾನದ ಪಕ್ಕದಲ್ಲೇ ಹೈಟೆಕ್ ಶೌಚಾಲಯವೊಂದು ಸಿದ್ಧ ಗೊಂಡಿದೆ. ಮೈದಾನಕ್ಕೆ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ.
ಒಂದು ವಾರ ಕಾಲ ನಡೆಯುವ ಕ್ರೀಡಾಕೂಟಕ್ಕಾಗಿ ಜಿಲ್ಲಾ ಕ್ರೀಡಾಂಗಣ, ಪಕ್ಕದ ಒಳಾಂಗಣ ಕ್ರೀಡಾಂಗಣವೂ ಸಿಂಗಾರ ಗೊಂಡಿದೆ. ಕ್ರೀಡಾಂಗಣವನ್ನು ಸಂಪರ್ಕಿಸುವ ಪುರಭವನದ ಪಕ್ಕದ ರಸ್ತೆಯ ಅಕ್ಕಪಕ್ಕದ ಎಲ್ಲಾ ಗಿಡಗಂಟಿ ಗಳನ್ನು ತೆಗೆದು ಸ್ಪಚ್ಛಗೊಳಿಸಲಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಇಂಟರ್‌ಲಾಕ್ ಹಾಕಿ ದುರಸ್ತಿಗೊಳಿಸಲಾಗಿದೆ.
ಮೈದಾನದೊಳಗೂ ಕ್ರೀಡಾಭಿಮಾನಿಗಳು, ಸಾರ್ವಜನಿಕರು ಕುಳಿತು ಆರಾಮವಾಗಿ ವಿವಿಧ ಸ್ಪರ್ಧೆಗಳನ್ನು ವೀಕ್ಷಿಸಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಸ್ಪರ್ಧೆಗಳು ಜ.21ರಿಂದ 23ರವರೆಗೆ ನಡೆಯಲಿದೆ. ಉಳಿದಂತೆ ಇಲ್ಲಿ ಬಾಕ್ಸಿಂಗ್ (18ರಿಂದ 20) ಹಾಗೂ ಕಬಡ್ಡಿ (19ರಿಂದ 23) ಸ್ಪರ್ಧೆಗಳು ನಡೆಯಲಿವೆ. ಜುಡೋ ಮತ್ತು ಕುಸ್ತಿ ಸ್ಪರ್ಧೆಗಳು ಪಕ್ಕದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ.
ಕ್ರೀಡಾಕೂಟದ ಮತ್ತೊಂದು ಪ್ರಮುಖ ಆಕರ್ಷಣೆಯಾದ ಸೈಕ್ಲಿಂಗ್ ಸ್ಪರ್ಧೆಗಳು ಉಪ್ಪೂರಿನಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದ ಸೈಕ್ಲಿಸ್ಟ್‌ಗಳು ಇದರಲ್ಲಿ ಮೇಲುಗೈ ಸಾಧಿಸುವ ನಿರೀಕ್ಷೆ ಇದೆ. ಕಯಾಕಿಂಗ್ ಹಾಗೂ ಕನೂಯಿಂಗ್ ಸ್ಪರ್ಧೆ ಗಳು ಸ್ವರ್ಣ ನದಿಯಲ್ಲಿ ನಡೆಯಲಿವೆ.
ಬಿಲ್ಲುಗಾರಿಕೆ ಸ್ಪರ್ಧೆಗಳು ಮಣಿಪಾಲ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದರೆ, ಮಾಹೆಯ ಮರೀನಾದಲ್ಲಿ ಟೆನಿಸ್ ಹಾಗೂ ಟೇಬಲ್ ಟೆನಿಸ್ ಸ್ಪರ್ಧೆಗಳೂ, ಎಂಐಟಿಯ ಹಾಕಿ ಅಂಗಣದಲ್ಲಿ ಹಾಕಿ ಸ್ಪರ್ಧೆಗಳೂ ನಡೆಯಲಿವೆ.
ಮಂಗಳೂರಿನಲ್ಲಿ ಉದ್ಘಾಟನೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಮೂರನೇ ಕರ್ನಾಟಕ ಕ್ರೀಡಾಕೂಟದ ಉದ್ಘಾಟನೆ ಜ.17ರ ಶುಕ್ರವಾರ ಸಂಜೆ 5ಗಂಟೆಗೆ ಮಂಗಳಾ ಸ್ಟೇಡಿಯಂನಲ್ಲಿ ನಡೆಯಲಿದೆ.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟ ಉದ್ಘಾಟಿಸ ಲಿದ್ದು, ಮಂಗಳೂರು ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ರೀಡಾ ಜ್ಯೋತಿಯ ಪ್ರಜ್ವಲನೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಮಾಡಿದರೆ, ಕ್ರೀಡಾ ಧ್ವಜಾರೋಹಣವನ್ನು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್ ಹೆಬ್ಬಾಳಕರ್, ಫೀಬಾ ಏಷ್ಯಾ ಮತ್ತು ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷ ಡಾ.ಕೆ ಗೋವಿಂದರಾಜ್, ಸಂಸದರಾದ ಬಿ.ವೈ ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕ್ಯಾಪ್ಟನ್ ಬ್ರಿಜೇಶ್ ಚೌಟ, ರಾಜ್ಯಸಭೆ ಸಂಸದರಾದ ಡಿ.ವೀರೇಂದ್ರ ಹೆಗ್ಗಡೆ, ಶಾಸಕರಾದ ಸುನಿಲ್ ಕುಮಾರ್, ಹರೀಶ್ ಪೂಂಜಾ, ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ಗುರುರಾಜ್ ಶೆಟ್ಟಿ ಗಂಟಿ ಹೊಳೆ, ಯಶ್‌ಪಾಲ್ ಎ ಸುವರ್ಣ, ಎ ಕಿರಣ್ ಕುಮಾರ್ ಕೊಡ್ಗಿ, ಗುರ್ಮೆ ಸುರೇಶ್ ಶೆಟ್ಟಿ, ಡಾ.ಭರತ್ ಶೆಟ್ಟಿ ವೈ, ರಾಜೇಶ್ ನಾಯ್ಕ್ ಯು ಹಾಗೂ ಅಶೋಕ್ ಕುಮಾರ್ ರೈ ಉಪಸ್ಥಿತರಿರುವರು.
ವಿಧಾನಪರಿಷತ್ ಶಾಸಕರಾದ ಎಸ್.ಎಲ್. ಭೋಜೇಗೌಡ, ಕೆ.ಪ್ರತಾಪ್ ಸಿಂಹ ನಾಯಕ್, ಐವನ್ ಡಿ ಸೋಜಾ, ಮಂಜುನಾಥ್ ಭಂಡಾರಿ, ಡಾ. ಧನಂಜಯ ಸರ್ಜಿ ಹಾಗೂ ಕಿಶೋರ್ ಕುಮಾರ್ ಪುತ್ತೂರು, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರ ಮನೋಜ್ ಕುಮಾರ್, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಸೇರಿದಂತೆ ರಾಜ್ಯ ಸರಕಾರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಇಲಾಖೆಯ ಪ್ರಕಟಣೆ ತಿಳಿಸಿದೆ.