‘ಉಡುಪಿ ಮಣಿಪಾಲ ಅಂದು-ಇಂದು’ ಕಾಫಿ ಟೇಬಲ್ ಕೃತಿ ಬಿಡುಗಡೆ

ಉಡುಪಿ, ಫೆ.1: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಘಟಕ, ಉಡುಪಿ ತಾಲೂಕು ಘಟಕದ ಸಹಯೋಗದಲ್ಲಿ ಭೂತರಾಜ ಪಬ್ಲಿಕೇಶನ್ ವತಿಯಿಂದ ಆಸ್ಟ್ರೋ ಮೋಹನ್ ಸಂಪಾದಿತ ‘ಉಡುಪಿ ಮಣಿಪಾಲ ಅಂದು ಇಂದು’ ಮಿನಿ ಕಾಫಿ ಟೇಬಲ್ ಆರನೇ ಕೃತಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಶನಿವಾರ ಸಂಜೆ ಲೋಕಾರ್ಪಣೆಗೊಂಡಿತು.
ಮಣಿಪಾಲ ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್. ಎಸ್.ಬಲ್ಲಾಳ್ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಉಡುಪಿ ಮಣಿಪಾಲದಲ್ಲಿ ಕಳೆದ ಐದು ದಶಕದಲ್ಲಾದ ಬದಲಾವಣೆ ಬೇರೆಲ್ಲೂ ಆಗಿಲ್ಲ. ಮಣ್ಣಪಳ್ಳದಲ್ಲಿ ಕಂಬಳ ಆಯೋಜನೆಗೆ ನೆರವು ನೀಡಲಾಗುವುದು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಣಿಪಾಲದ ಮಣ್ಣಪಳ್ಳದಲ್ಲಿ ಕಂಬಳ ಆಯೋಜಿಸಲು ಚಿಂತನೆ ನಡೆದಿದೆ. ವಿಶ್ವದಲ್ಲೇ ವಿಶಿಷ್ಟ ಸ್ಥಾನ ಪಡೆದ ಉಡುಪಿ, ಮಣಿಪಾಲ ಮುಂದಿನ 20, 25 ವರ್ಷಗಳಲ್ಲಾಗುವ ಅಭಿವೃದ್ಧಿಯಲ್ಲಿ ಯುವಜನರು ಕೈ ಜೋಡಿಸಬೇಕು. ಕೃಷ್ಣ ಕಾರಿಡಾರ್ ನಿರ್ಮಾಣಕ್ಕೆ ಮಣಿಪಾಲ ವಿವಿ ನೆರವು ಪಡೆಯಲಾಗುವುದು ಎಂದು ತಿಳಿಸಿದರು.
ಮಣಿಪಾಲ ಮೀಡಿಯಾ ನೆಟ್ವರ್ಕ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು.ಪೈ ಅಧ್ಯಕ್ಷತೆ ವಹಿಸಿದ್ದರು. ಅದಾನಿ ಸಮೂಹದ ಕಾರ್ಯ ನಿರ್ವಾಹಕ ಅಧ್ಯಕ್ಷ ಕಿಶೋರ್ ಆಳ್ವ, ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು, ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ. ಮಾತನಾಡಿದರು.
ಭೂತರಾಜ ಪಬ್ಲಿಕೇಶನ್ ಸಂಸ್ಥೆಯ ಪ್ರವೀಣಾಮೋಹನ್ ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ಡಾ. ನಿಕೇತನಾ ಕೃತಿ ಪರಿಚಯ ಮಾಡಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು. ಆಸ್ಟ್ರೋ ಮೋಹನ್ ಸ್ವಾಗತಿಸಿದರು.