ಮಣಿಪಾಲ| ಸಿನೀಮಿಯ ರೀತಿಯ ಪೊಲೀಸ್ ಕಾರ್ಯಾಚರಣೆ: ಕಾರು ಬಿಟ್ಟು ಆರೋಪಿ ಪರಾರಿ, ಯುವತಿಯ ಬಂಧನ
ಇನ್ಸ್‌ಸ್ಪೆಕ್ಟರ್ ಸಹಿತ ಐವರು ಪೊಲೀಸರಿಗೆ ಗಾಯ: ಹಲವು ವಾಹನ ಜಖಂ

ಮಣಿಪಾಲ, ಮಾ.5: ನೆಲಮಂಗಲದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಮಂಗಳವಾರ ರಾತ್ರಿ ಮಣಿಪಾಲದಲ್ಲಿ ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿದ್ದು, ಈ ವೇಳೆ ಆರೋಪಿ ತನ್ನ ಕಾರಿನಲ್ಲಿ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದಾನೆ.
ಇದರಿಂದ ಇನ್ಸ್‌ಸ್ಪೆಕ್ಟರ್ ಸಹಿತ ಐವರು ಪೊಲೀಸರು ಗಾಯ ಗೊಂಡಿದ್ದಾರೆ. ಆರೋಪಿ ಜೊತೆ ಕಾರಿನಲ್ಲಿದ್ದ ಆತನ ಗೆಳತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪರಾರಿಯಾದ ಆರೋಪಿಯನ್ನು ಗರುಡ ಗ್ಯಾಂಗ್‌ನ ಸದಸ್ಯ, ನಾವುಂದ ಮೂಲದ ಇಸಾಕ್(27) ಎಂದು ಗುರುತಿಸಲಾಗಿದೆ. ಈತನಿಗೆ ಸಹಕಾರ ನೀಡಿದ ಆರೋಪದಲ್ಲಿ ಆತನ ಜೊತೆ ಕಾರಿನಲ್ಲಿದ್ದ ಆತನ ಗೆಳತಿ ಸುಳ್ಯದ ಸುಜೈನ್(23) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ದರೋಡೆ ಪ್ರಕರಣ ಆರೋಪಿ: ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಥಳೀಯರೊಬ್ಬರನ್ನು ತಂಡವೊಂದು ಅಪಹರಿಸಿ 40ಲಕ್ಷ ರೂ. ದರೋಡೆ ಮಾಡಿತ್ತು. ಇದರಲ್ಲಿ ಇಸಾಕ್ ಎರಡನೇ ಆರೋಪಿಯಾಗಿದ್ದು, ತಲೆಮರೆಸಿಕೊಂಡಿದ್ದನು.
ಇಸಾಕ್‌ನ ಪತ್ತೆಗಾಗಿ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಮಾ.4ರಂದು ಮಣಿಪಾಲಕ್ಕೆ ಬಂದಿದ್ದರು. ಆತ ತನ್ನ ಗೆಳತಿ ಸುಜೈನ್ ಹಾಗೂ ಆಕೆಯ ಕುಟುಂಬ ಉಳಿದುಕೊಂಡಿದ್ದ ಮಣಿಪಾಲದ ಡಿಸಿ ಕಚೇರಿ ರಸ್ತೆಯ ವಸತಿ ಸಮುಚ್ಛಯಕ್ಕೆ ಬರುವ ಮಾಹಿತಿ ಪೊಲೀಸರಿಗೆ ದೊರಕಿತ್ತು.
ಅದರಂತೆ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯ ಎಸ್ಸೈ ಸೋಮಶೇಖರ ಮತ್ತು ಪೊಲೀಸ್ ನಿರೀಕ್ಷಕ ನರೇಂದ್ರ ಬಾಬು ಹಾಗೂ ಸಿಬ್ಬಂದಿಗಳು ಆರೋಪಿಗಾಗಿ ಕಾದು ಕುಳಿತಿದ್ದರು. ಈ ವೇಳೆ ಅಲ್ಲಿಗೆ ನಂಬರ್ ಪ್ಲೇಟ್ ಇಲ್ಲದ ಮಹೇಂದ್ರ ತಾರ್ ಕಾರು ಬಂದಿತ್ತು.
ಪೊಲೀಸರ ಕೊಲೆಯತ್ನ: ಕಾರಿನಲ್ಲಿ ಇಸಾಕ್ ಇರಬಹುದೆಂದು ಶಂಕಿಸಿ ಪೊಲೀಸರು ತಮ್ಮ ಕಾರಿನಲ್ಲಿ ಆತನ ಕಾರನ್ನು ಹಿಂಬಾಲಿಸಿದರು. ವಸತಿ ಸಮುಚ್ಛಯದ ಬಳಿ ಇರುವ ಮೊಬೈಲ್ ಅಂಗಡಿಯ ಮುಂಭಾಗ ಬಂದ ತಾರ್ ಕಾರಿಗೆ ಸುಜೈನ್ ಹತ್ತಿದ್ದು, ಈ ವೇಳೆ ಪೊಲೀಸರು ತಾರ್ ಕಾರಿನಲ್ಲಿರುವುದು ಇಸಾಕ್ ಎಂಬುದನ್ನು ಖಚಿತಪಡಿಸಿಕೊಂಡರು.
ಈ ವೇಳೆ ಪೊಲೀಸರು ತಾರ್ ಕಾರನ್ನು ಅಡ್ಡಗಟ್ಟಲು ಪ್ರಯತ್ನಿಸಿದಾಗ ಇಸಾಕ್, ಪೊಲೀಸರನ್ನು ನೋಡಿ, ಕೊಲೆ ಮಾಡುವ ಉದ್ದೇಶದಿಂದ ಸಿಬ್ಬಂದಿ ವಿಶ್ವನಾಥ ಎಂಬವರಿಗೆ ಕಾರಿನಿಂದ ಗುದ್ದಿದನು. ಇದರ ರಭಸಕ್ಕೆ ಸಿಬ್ಬಂದಿ ಹಾರಿ ಪುಟ್‌ಪಾತ್‌ನಲ್ಲಿ ಬಿದ್ದು ತೀವ್ರ ವಾಗಿ ಗಾಯಗೊಂಡರು.
ಇದೇ ವೇಳೆ ಪೊಲೀಸ್ ನಿರೀಕ್ಷಕ ನರೇಂದ್ರ ಬಾಬು, ಸಿಬ್ಬಂದಿಗಳಾದ ಕೇಶಾವನಂದ, ಬಾಲಾಜಿ ಸಿಂಗ್ ಮತ್ತು ರಾಯಗೊಂಡ ಎಂಬವರು ಕೂಡ ಗಾಯಗೊಂಡರೆಂದು ದೂರಲಾಗಿದೆ. ನಂತರ ಇಸಾಕ್ ತನ್ನ ಕಾರನ್ನು ಅತೀ ವೇಗವಾಗಿ ರಿವರ್ಸನಲ್ಲಿ ಚಲಾಯಿಸಿಕೊಂಡು ಬಂದಿದ್ದು, ಈ ವೇಳೆ ಕಾರಿನ ಹಿಂಭಾಗದಲ್ಲಿದ್ದ ಎಸ್ಸೈ ಸೋಮಶೇಖರ ಹಾರಿ ತಪ್ಪಿಸಿಕೊಂಡರು.
ಹಲವು ವಾಹನಗಳಿಗೆ ಢಿಕ್ಕಿ: ಬಳಿಕ ಇಸಾಕ್, ಪೊಲೀಸರು ಬಂದಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಜಖಂ ಗೊಳಿಸಿದನು. ನಂತರ ಆತನ ತನ್ನ ಕಾರನ್ನು ರಿವರ್ಸನಲ್ಲಿಯೇ ಓಡಿಸಿಕೊಂಡು ಹೋಗಿ ರಸ್ತೆ ಬದಿ ನಿಲ್ಲಿಸಿದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಜಖಂಗೊಳಿಸಿದನು.
ಅಲ್ಲದೇ ಮುಂದೆ ಸಾಗಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಕ್ರೆಟಾ ಕಾರಿಗೆ ಢಿಕ್ಕಿ ಹೊಡೆದು ಜಖಂಗೊಳಿಸಿದನು. ಆತನನ್ನು ಹಿಡಿಯಲು ಹೋದ ಪೊಲೀಸರ ಕಾರಿಗೂ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಜಖಂಗೊಳಿಸಿ ತಪ್ಪಿಸಿ ಕೊಂಡು ಅಲ್ಲಿಂದ ಕಾರಿನಲ್ಲಿ ಪರಾರಿಯಾದನು.
ಬಳಿಕ ಪೊಲೀಸರು ಆತನನ್ನು ಹಿಂಬಾಲಿಸಿಕೊಂಡು ಹೋದರು. ಇಸಾಕ್ ತನ್ನ ಕಾರನ್ನು ಸುಮಾರು 3 ಕಿ.ಮೀ. ದೂರ ಓಡಿಸಿಕೊಂಡು ಹೋಗಿದ್ದು, ಮಣ್ಣಪಳ್ಳ ಬಳಿ ಕಾರಿನ ಟಯರ್ ಪಂಚರ್ ಆದ ಪರಿಣಾಮ ಆತನ ಅದನ್ನು ಅಲ್ಲೇ ಬಿಟ್ಟು ತನ್ನ ಗೆಳತಿ ಜೊತೆ ಪರಾರಿಯಾದನು.
ಕಾರಿನಲ್ಲಿದ್ದ ಗೆಳತಿ ವಶಕ್ಕೆ: ಅಲ್ಲಿಂದ ಓಡಿ ಹೋದ ಇಸಾಕ್, ತನ್ನ ಗೆಳತಿಯನ್ನು ರಿಕ್ಷಾದಲ್ಲಿ ಕಳುಹಿಸಿ ಆತ ಒಬ್ಬಂಟಿಯಾಗಿ ಪರಾರಿಯಾದನು. ಈ ಕುರಿತು ಮಾಹಿತಿ ಕಳೆ ಹಾಕಿದ ಪೊಲೀಸರು ಸುಜೈನ್‌ನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
ಬಳಿಕ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರು, ಆಕೆ ಆರೋಪಿಗೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿಸಿದರು. ಸುಳ್ಯ ಮೂಲದ ಸುಜೈನ್ ಕಾನೂನು ಪದವಿ ವಿದ್ಯಾರ್ಥಿಯಾಗಿದ್ದಾಳೆ. ಆಕೆಯ ಸಹೋದರಿಯ ಶಿಕ್ಷಣದ ಸಲುವಾಗಿ ಅವರ ತಾಯಿ ಮಣಿಪಾಲದ ವಸತಿ ಸಮುಚ್ಛಯದಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.
ಆರೋಪಿಯ ಬಿಟ್ಟು ಹೋದ ಕಾರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡು ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಎಸ್ಸೈ ಸೋಮಶೇಖರ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆರೋಪಿ ಇಸಾಕ್‌ನ ಬಂಧನಕ್ಕೆ ಕಾರ್ಯಾಚರಣೆ ನಡೆಸುವ ವೇಳೆ ಪೊಲೀಸ್ ಜೀಪು ಸಹಿತ ಸಾರ್ವಜನಿಕರ ಕೆಲವು ವಾಹನಗಳು ಜಖಂಗೊಂಡಿವೆ. ಇದಕ್ಕೆ ಸಂಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ. ಕಾರಿನಲ್ಲಿದ್ದ ಯುವತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ಜರಗಿಸಲಾಗುವುದು. ತಲೆಮರೆಸಿಕೊಂಡಿರುವ ಇಸಾಕ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಆರೋಪಿಯನ್ನು ಶೀಘ್ರವೇ ಬಂಧಿಸಲಾಗುವುದು’
ಡಾ.ಅರುಣ್ ಕೆ., ಉಡುಪಿ ಎಸ್ಪಿ
ಇಸಾಕ್ ನಟೋರಿಯಸ್ ಕ್ರಿಮಿನಲ್
ನಾವುಂದ ಮೂಲದ ಇಸಾಕ್, ಮಂಗಳೂರಿನಲ್ಲಿ ವಾಸ ಮಾಡಿ ಕೊಂಡಿದ್ದನು. ಈತನ ವಿರುದ್ಧ ಬೆಂಗಳೂರು, ಕಾರ್ಕಳ, ಉಡುಪಿ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ದರೋಡೆ, ದೊಂಬಿ, ದನ ಕಳ್ಳತನ ಪ್ರಕರಣಗಳು ದಾಖಲಾಗಿವೆ.
ಗರುಡ ಗ್ಯಾಂಗ್‌ನ ಸದಸ್ಯನಾಗಿರುವ ಈತ, 2024ರ ಮೇ 18ರಂದು ನಸುಕಿನ ವೇಳೆ ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಗ್ಯಾಂಗ್‌ವಾರ್‌ನಲ್ಲಿದ್ದ ಎಂಬ ಶಂಕೆ ಇತ್ತು. ಆತನ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆದರೆ ಆ ಪ್ರಕರಣದಲ್ಲಿ ಆತನ ಬಂಧನವಾಗಿರಲಿಲ್ಲ. ಅಲ್ಲದೆ ಇಸಾಕ್ ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದನು ಎಂದು ತಿಳಿದುಬಂದಿದೆ.