‘ಕೊರಗ ಸಮುದಾಯದ ಅಭಿವೃದ್ಧಿಗೆ ಸರಕಾರ ಆದ್ಯತೆ ನೀಡಬೇಕು’

ಉಡುಪಿ: ಬುಡಕಟ್ಟು ಕೊರಗ ಸಮುದಾಯವು ಜಿಲ್ಲೆಯಲ್ಲಿ ಅತಿ ಹಿಂದುಳಿದ ಸಮುದಾಯವಾಗಿದ್ದು, ಪಿ.ವಿ.ಟಿ.ಜಿ ಎಂದು ಗುರುತಿಸಲ್ಪ ಈ ಸಮುದಾಯದ ಜನಸಂಖ್ಯೆ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಕುಸಿಯುತ್ತಿರುವುದು ಖೇಧಕರ. ಈ ನಿಟ್ಟಿನಲ್ಲಿ ಸರಕಾರವು ಆದ್ಯತೆಯ ನೆಲೆಯಲ್ಲಿ ಸಮುದಾಯದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಶಿರ್ವದ ಪೆರ್ನಾಲ್‌ನಲ್ಲಿ ಕೊರಗರ ಅಭಿವೃದ್ಧಿ ಸಂಘಗಳ ಒಕ್ಕೂಟ, ಕರ್ನಾಟಕ ಕೇರಳ ಮತ್ತು ಸಮಗ್ರ ಗ್ರಾಮೀಣ ಆಶ್ರಮ ಪೆರ್ನಾಲು ಇದರ ಸಂಯೋಜನೆಯಲ್ಲಿ ನಡೆದ ವಿಶ್ವ ಮಹಿಳೆಯರ ದಿನಾಚರಣೆ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ತತ್ವ ಸಿದ್ಧಾಂತಗಳು ಕೊರಗರ ಸಾಮಾಜಿಕ ನ್ಯಾಯ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿನ ಮೂಲ ನಿವಾಸಿಗಳಾದ ಕೊರಗರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಔದ್ಯೋಗಿಕ ವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸರಕಾರ ಯಾವುದೇ ಯೋಜನೆ ಗಳನ್ನು ಕೈಗೊಂಡರೂ ಅವು ಸಮರ್ಪಕವಾಗಿ ಅನುಷ್ಠಾನವಾಗುವುದನ್ನು ಖಚಿತಪಡಿಸಿಕೊಳ್ಳಬೇಕು. ಕೊರಗಲ್ಲಿ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸಬೇಕು ಎಂದರು.
ಕೊರಗ ಸಮುದಾಯದ ವಿದ್ಯಾವಂತ ಯುವಜನತೆಗೆ ವಿಶೇಷವಾಗಿ ನೇರ ನೇಮಕಾತಿಯ ಮುಖಾಂತರ ಉದ್ಯೋಗ ನೀಡಬೇಕು ಹಾಗೂ ಕೊರಗರು ಡಾ.ಬಿ.ಆರ್. ಅಂಬೇಡ್ಕರ್ ಆಶಯದಂತೆ ತಮ್ಮ ಅಭಿವೃದ್ಧಿ ಗಾಗಿ ನಿರಂತರ ಹೋರಾಟಗಳನ್ನು ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಣಿಪಾಲ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಐಡಾ ಡಿ’ಸೋಜಾ ಮಾತನಾಡಿ, ಸಮುದಾಯ ತನ್ನದೇ ಆದ ಅನನ್ಯತೆ, ಸಂಸ್ಕೃತಿ ಮತ್ತು ವಿಶಿಷ್ಟ ಭಾಷೆಯನ್ನು ಹೊಂದಿದ್ದು ಸಾಮುದಾಯಿಕ ಗುರಿಯನ್ನು ಸಾಧಿಸಲು ಸಂಘಟಿತರಾಗುವುದು ಬಹಳ ಮುಖ್ಯ ಎಂದು ಹೇಳಿದರು.
ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಗುಂಡ್ಮಿ ಮತ್ತು ಸಮಗ್ರ ಗ್ರಾಮೀಣ ಆಶ್ರಮದ ಸಂಯೋಜಕ ಅಶೋಕ ಶೆಟ್ಟಿ ಉಪಸ್ಥಿತರಿದ್ದರು.
ಪದ್ಮ ಎಸ್. ವೇಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಸುಪ್ರಿಯಾ ಎಸ್. ಕಿನ್ನಿಗೋಳಿ ನಿರೂಪಿಸಿದರು. ಕಾರ್ಯಗಾರದಲ್ಲಿ ಸಮುದಾಯದ ಐವತ್ತಕ್ಕೂ ಅಧಿಕ ಮಂದಿ ಸಕ್ರಿಯವಾಗಿ ಭಾಗವಹಿಸಿದ್ದರು.