ತ್ರಾಸಿ ಗ್ರಾಮಸಭೆ| ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಕುಂದಾಪುರ, ಮಾ.21: ತ್ರಾಸಿ ಬೀಚ್‌ನಲ್ಲಿ ಕೋಟಿ ಕೋಟಿ ರೂ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದು ಕೇವಲ ಪತ್ರಿಕೆಗಳಲ್ಲಿ ಮಾತ್ರ ಬರುತ್ತಿರುವುದು ಬಿಟ್ಟರೆ ಇಲ್ಲಿ ಯಾವ ಕೆಲಸವೂ ಆಗುತ್ತಿಲ್ಲ. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಸ್ಥಳೀಯಾಡಳಿತ ಮತ್ತು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಯೋಜನೆ ರೂಪಿಸಿ ಕಾಮಗಾರಿ ನಡೆಸುತ್ತಿದ್ದು, ಇದರಿಂದ ಯಾವುದೇ ಪ್ರಯೋಜನ ಇಲ್ಲ. ಸರಕಾರದ ಅನುದಾನವನ್ನು ವ್ಯರ್ಥ ಪೋಲು ಮಾಡಲಾಗುತ್ತಿದೆ. ತ್ರಾಸಿ ಬೀಚ್ ಬಗ್ಗೆ ಹೇಳುವವರು ಕೇಳುವವರು ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆಯ ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ತ್ರಾಸಿ ಗ್ರಾಮಸ್ಥರು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತ್ರಾಸಿಯ ಡಾ.ಅಂಬೇಡ್ಕರ್ ಸಭಾಭವನದಲ್ಲಿ ನಡೆದ ತ್ರಾಸಿ ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ತ್ರಾಸಿ ಬೀಚ್ ಅಭಿವೃದ್ಧಿ ಬಗ್ಗೆ ತೀವ್ರ ಅಸಮಾ ಧಾನ ವ್ಯಕ್ತಪಡಿಸಿದರು. ತ್ರಾಸಿ ಬೀಚ್‌ನಲ್ಲಿ ಸುಮಾರು 9.5 ಕೋಟಿ ರೂ. ಅಭಿವೃದ್ಧಿ ಕಾಮಗಾರಿ ನಡೆಯು ತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಮುತ್ತುರಾಜ್ ಹೇಳುತ್ತಿದ್ದಂತೆಯೇ ಜನರು ಆಕ್ರೋಶ ಹೊರಹಾಕಿದರು.
ತ್ರಾಸಿ ಬೀಚ್‌ನಲ್ಲಿ ಅಭಿವೃದ್ಧಿ ಎಂಬುದು ಕೇವಲ ದಾಖಲೆಗಳಲ್ಲಿ ಮಾತ್ರ ಇದೆಯೇ ಹೊರತು ನಿಜವಾಗಿ ಇಲ್ಲಿ ಯಾವ ಅಭಿವೃದ್ಧಿಯೂ ಆಗುತ್ತಿಲ್ಲ. ಈ ಯೋಜನೆಯಲ್ಲಿ ಕೆಲವೊಂದು ಅನಗತ್ಯ ಕಾಮಗಾರಿ ಇದೆ. ಬೀಚ್‌ನಲ್ಲಿ ನಿರ್ಮಿಸಲಾಗಿರುವ ಗೂಡಂಗಡಿಗಳನ್ನು ಮೂರು ಬಾರಿ ಅಲ್ಲಿಂದ ತೆರವು ಮಾಡಲಾಗಿದೆ. ಇದನ್ನು ನಿರ್ಮಿಸಿ ಆರೇಳು ವರ್ಷ ಕಳೆದರೂ ಇನ್ನೂ ಯಾರಿಗೂ ಉಪಯೋಗಕ್ಕೆ ನೀಡಿಲ್ಲ ಎಂದು ಹರಿಹಾಯ್ದರು.
ರಾ.ಹೆ.ಯ ಇನ್ನೊಂದು ಬದಿಯಲ್ಲಿ ನಿರ್ಮಿಸಲಾಗುತ್ತಿರುವ ರೆಸ್ಟೊರೆಂಟ್ ಮೇಲೆ ಅವೈಜ್ಞಾನಿಕವಾಗಿ ಶೀಟ್ ಹಾಕಲಾಗಿದೆ. ಕರಾವಳಿ ತೀರದಲ್ಲಿ ಶೀಟ್ ಹಾಕಿದರೆ ಒಂದೆರೆಡು ವರ್ಷದಲ್ಲಿ ತುಕ್ಕು ಹಿಡಿದು ಹೋಗುವ ಸಾಧ್ಯತೆ ಇದೆ ಅಲ್ಲದೆ ಗಾಳಿಗೆ ಶೀಟ್ ಉಳಿಯುವುದು ಕಷ್ಟ. ಇವೆಲ್ಲವೂ ಗೊತ್ತಿದ್ದರೂ ರೆಸ್ಟೊರೆಂಟ್ ಮೇಲೆ ಶೀಟ್ ಹಾಕಿರುವುದು ಸರಿಯಲ್ಲ ಎಂದು ಸ್ಥಳೀಯರಾದ ರವೀಂದ್ರ ಖಾರ್ವಿ, ಪ್ರದೀಪ್ ಖಾರ್ವಿ, ಅಂತೋನಿ, ಜಿಪಂ ಮಾಜಿ ಅಧ್ಯಕ್ಷ ಅನಂತ ಮೊವಾಡಿ ಮೊದಲಾದವರು ಆಕ್ಷೇಪಿಸಿದರು.
ತ್ರಾಸಿ ಬೀಚ್‌ಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಶೌಚಾಲಯ ಮತ್ತು ಸ್ನಾನಗೃಹವನ್ನು ತುರ್ತಾಗಿ ನಿರ್ಮಿಸಬೇಕು ಎಂದು ಅನಂತ ಮೊವಾಡಿ ಆಗ್ರಹಿಸಿದರು. ತ್ರಾಸಿ ಬೀಚ್‌ನಲ್ಲಿ ಬಡ ವ್ಯಾಪಾರಿಗಳು ಇಟ್ಟು ಕೊಂಡಿರುವ ಗೂಡಂಗಡಿ ತೆರವುಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆ ಸ್ಥಳೀಯ ಪಂಚಾಯತ್ ಮೇಲೆ ಒತ್ತಡ ಹೇರಿ ನೋಟಿಸ್ ಕೊಡುತ್ತಿದೆ. ಆದರೆ ಮಾರಾಸ್ವಾಮಿ ದೇವಸ್ಥಾನದ ಎದುರು ಹಾಕಿರುವ ಗೂಡಂಗಡಿಗಳಿಗೆ ಯಾವುದೇ ನೋಟಿಸ್ ನೀಡಿಲ್ಲ. ಇದು ಯಾವ ನ್ಯಾಯ ಎಂದು ಗೂಡಂಗಡಿ ಮಾಲೀಕ ಪಾಂಡುರಂಗ ಇಲಾಖೆ ಕ್ರಮದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬೀಚ್‌ನಲ್ಲಿ ಕರಾವಳಿಯ ಸಂಸ್ಕೃತಿಗೆ ಸಂಬಂಧಪಡದ ಕಲಾಕೃತಿಗಳನ್ನು ರಚಿಸಿರುವ ಬಗ್ಗೆ ರವೀಂದ್ರ ಖಾರ್ವಿ ಆಕ್ರೋಶ ವ್ಯಕ್ತಪಡಿಸಿದರು. ತ್ರಾಸಿ ಬೀಚ್ ಅಭಿವೃದ್ಧಿ ಸಮಿತಿಯನ್ನು ಪುನರ್‌ರಚಿಸಬೇಕು. ಯಾವುದೇ ಅಭಿವೃದ್ಧಿ ಕಾಮಗಾರಿ ಪ್ರಾರಂಭಕ್ಕೂ ಮುನ್ನ ಸ್ಥಳೀಯಾಡಳಿತದ ಗಮನಕ್ಕೆ ತಂದು ಸ್ಥಳೀಯರ ಅಭಿಪ್ರಾಯಪಡೆದುಕೊಂಡೇ ಕಾಮಗಾರಿ ನಿರ್ವಹಿಸಬೇಕು. ತ್ರಾಸಿ ಬೀಚ್ ಅಭಿವೃದ್ಧಿ ಬಗ್ಗೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಸ್ಥಳೀಯಾಡಳಿತ, ಸ್ಥಳೀಯರ ಸಭೆ ಕರೆದು ಚರ್ಚೆ ನಡೆಸ ಬೇಕು ಎಂದು ಅನಂತ ಮೊವಾಡಿ, ರವೀಂದ್ರ ಖಾರ್ವಿ, ಶರೀಫ್ ಮೊದಲಾದವರು ಮನವಿ ಮಾಡಿದರು.
ಸ್ಕೈ ಡೈನಿಂಗ್ ವಿರುದ್ಧ ಆಕ್ರೋಶ: ರಾ.ಹೆ.ಗೆ ಸಮೀಪದಲ್ಲೇ ನಡೆಯುತ್ತಿರುವ ಸ್ಕೈ ಡೈನ್‌ನಿಂದ ಅಪಘಾತ ಆಗುದಿಲ್ಲವೇ, ಸುಮಾರು ಒಂದು ಎಕ್ರೆ ಜಾಗವನ್ನು ಸ್ಕೈ ಡೈನ್ ನಡೆಸಲು ಬಾಡಿಗೆಗೆ ನೀಡಿದ್ದು, ಇದರಿಂದ ಯಾವುದೇ ಅನಾಹುತ ಆದರೆ ಯಾರು ಹೊಣೆ? ಎಂದು ಪ್ರಶ್ನಿಸಿದ ರವೀಂದ್ರ ಖಾರ್ವಿ, ಅಂತೋನಿ, ಶರೀಫ್ ಹಾಗೂ ಪ್ರದೀಪ್ ಖಾರ್ವಿ, ಪಂಚಾಯತ್ ನಿರಾಕ್ಷೇಪಣಾ ಪತ್ರ ಇಲ್ಲದೆ ನಡೆಯುತ್ತಿರುವ ಸ್ಕೈಡೈನ್ ನಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಇದನ್ನು ಬಂದ್ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಮಧ್ಯಪ್ರವೇಶಿಸಿದ ಗ್ರಾಮ ಪಂಚಾಯತ್ ಅಧ್ಯಕ್ಷ ಮಿಥುನ್ ದೇವಾಡಿಗ, ತ್ರಾಸಿ ಬೀಚ್‌ನಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಲು ಹಿರಿಯ ಅಧಿಕಾರಿಗಳ ಸಭೆ ಆಯೋಜಿಸಬೇಕು ಎಂದು ಹೇಳಿದರು.
ಗಣಿ ಇಲಾಖೆ ಅಧಿಕಾರಿ ಸಭೆಯಲ್ಲಿ ಗೈರು ಹಾಜರಾಗಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿ ಕರು, ತ್ರಾಸಿ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಗಣಿ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ. ಜನರು ಗ್ರಾಪಂ ಅಧ್ಯಕ್ಷರು, ಪಿಡಿಒ ಮೇಲೆ ಆರೋಪ ಮಾಡುವಂತಾಗಿದೆ. ಅಕ್ರಮ ಮರಳು ಗಣಿಗಾರಿಕೆಗೂ ಪಂಚಾಯತ್‌ಗೆ ಯಾವುದೇ ಸಂಬಂಧ ಇಲ್ಲದಿದ್ದರೂ ಜನರು ಸ್ಥಳೀಯ ಜನಪ್ರತಿನಿಧಿಗಳನ್ನು ಅಧಿಕಾರಿಗಳನ್ನು ಸಂಶಯದಿಂದ ನೋಡುವಂತಾ ಗಿದೆ ಎಂದು ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದರು.
ತ್ರಾಸಿ ಗ್ರಾಪಂ ಅಧ್ಯಕ್ಷ ಮಿಥುನ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಮೇಶ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಪಂ. ಉಪಾಧ್ಯಕ್ಷೆ ಹೇಮಾ, ಸದಸ್ಯರಾದ ವಿಜಯ ಪೂಜಾರಿ, ನಾಗರತ್ನ ಶೆಟ್ಟಿಗಾರ್, ಗೀತಾ ದೇವಾಡಿಗ, ರಾಜು ಮೆಂಡನ್, ಪಿಡಿಒ ಶೋಭಾ ಉಪಸ್ಥಿತರಿದ್ದರು.