ಮರಗಳ ತೆರವು: ಅಹವಾಲು ಸಭೆ

ಸಾಂದರ್ಭಿಕ ಚಿತ್ರ
ಉಡುಪಿ, ಎ.1: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಗೆ ಅಡಚಣೆ ಯಾಗುವ ಬೈಂದೂರು-ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿಯ ತಗ್ಗರ್ಸೆ ಗ್ರಾಮದ 153 ಮರಗಳು, ಯಳಜಿತ್ ಗ್ರಾಮದ 600 ಮರಗಳು, ಗೋಳಿಹೊಳೆ ಗ್ರಾಮದ 1242 ಮರಗಳು ಹಾಗೂ ಜಡ್ಕಲ್ ಗ್ರಾಮದ 219 ಮರಗಳು ಸೇರಿದಂತೆ ಒಟ್ಟು 2214 ವಿವಿಧ ಜಾತಿಯ ಮರಗಳನ್ನು ತೆರವು ಗೊಳಿಸುವುದಕ್ಕಾಗಿ ಸಾರ್ವಜನಿಕರ ಅಹವಾಲು ಸಭೆಯನ್ನು ಕರೆಯಲಾಗಿದೆ.
ಸಭೆಯು ಎಪ್ರಿಲ್ 22ರಂದು ಬೈಂದೂರು ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ತಗ್ಗರ್ಸೆ ಗ್ರಾಮಕ್ಕೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಗೆ, ಯಳಜಿತ್ ಗ್ರಾಮಕ್ಕೆ ಸಂಬಂಧಿಸಿದಂತೆ 11:30ಕ್ಕೆ, ಗೋಳಿಹೊಳೆ ಗ್ರಾಮಕ್ಕೆ ಸಂಬಂಧಿಸಿದಂತೆ ಅಪರಾಹ್ನ 2:00ಕ್ಕೆ ಹಾಗೂ ಜಡ್ಕಲ್ ಗ್ರಾಮಕ್ಕೆ ಸಂಬಂಧಿ ಸಿದಂತೆ 3:30ಕ್ಕೆ ನಡೆಯಲಿದೆ.
ಈ ಬಗ್ಗೆ ಸಾರ್ವಜನಿಕರಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಯಲ್ಲಿ ಹಾಜರಾಗಿ ಅಥವಾ ಆ ದಿನಾಂಕದ ಒಳಗೆ ವೃಕ್ಷ ಅಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ ಕುಂದಾಪುರ ಇವರಿಗೆ ಲಿಖಿತ ರೂಪದಲ್ಲಿ, ಅಂಚೆ ಮೂಲಕ ಅಥವಾ ಇ-ಮೇಲ್ ಮೂಲಕ -kpurforest@yahoo.com- ಸಹ ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆ ತಿಳಿಸಿದೆ.