ಗ್ರಾಮೀಣ ಕ್ರೀಡೆ ಖೋ-ಖೋ ಒಲಿಂಪಿಕ್ಸ್ಗೆ ಸೇರ್ಪಡೆಗೊಳ್ಳಲಿ: ಸಮಾರೋಪದಲ್ಲಿ ಅದಮಾರುಶ್ರೀ ಆಶಯ

ಉಡುಪಿ, ಎ.12: ಭಾರತದಲ್ಲೇ ಹುಟ್ಟಿ ಗ್ರಾಮೀಣ ಭಾಗದಲ್ಲಿ ಜನಪ್ರಿಯ ಕ್ರೀಡೆಯಾಗಿರುವ ಖೋ-ಖೋ ಭವಿಷ್ಯದ ಒಲಿಂಪಿಕ್ ಕ್ರೀಡಾಕೂಟದಲ್ಲೂ ಸೇರ್ಪಡೆಗೊಳ್ಳುವಂತಾಗಲಿ ಎಂದು ಉಡುಪಿ ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿರುವ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.
ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಸಹಯೋಗದೊಂದಿಗೆ ಉಡುಪಿಯ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಕಾಲೇಜಿನ ಶ್ರೀವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ 2024-25ನೇ ಸಾಲಿನ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಖೋ-ಖೋ ಟೂರ್ನಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿವಿಯ ಕುಲಪತಿಗಳಾದ ಪ್ರೊ.ಪಿ.ಎಲ್.ಧರ್ಮ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಉತ್ತಮ ಕಲಿಕೆಯತ್ತ ಪ್ರೇರೇಪಿಸುವ ಉತ್ತಮ ಶಿಕ್ಷಕರು, ಅಧ್ಯಾಪಕರು ಹಾಗೂ ಪ್ರಾಧ್ಯಾಪಕರ ಕೊರತೆ ಇದೆ. ನಮ್ಮ ಆದರ್ಶ ಶಿಕ್ಷಕರ ಪ್ರೇರಣೆಯಿಂದ ಉತ್ತಮ ವಿದ್ಯಾರ್ಥಿಗಳು ಶಿಕ್ಷಣಕ್ಷೇತ್ರವನ್ನು ಹೆಚ್ಚೆಚ್ಚು ಆಯ್ಕೆ ಮಾಡಿಕೊಳ್ಳು ವಂತಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ಮುನಿಯಾಲು ಉದಯಕೃಷ್ಣ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಅದಮಾರು ಮಠ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ.ಎ.ಪಿ. ಭಟ್, ಗೌರವ ಖಜಾಂಜಿ ಸಿ.ಎ. ಜಿ.ವಿ.ಕೃಷ್ಣ, ಉಡುಪಿ ಪೂರ್ಣಪ್ರಜ್ಞ ಸಮೂಹ ಸಂಸ್ಥೆಗಳ ಶೈಕ್ಷಣಿಕ ನಿರ್ದೇಶಕ ಡಾ. ಪಿ. ಶ್ರೀರಮಣ ಐತಾಳ್, ಕಾಲೇಜು ಆಡಳಿತ ಮಂಡಳಿಯ ಗೌರವ ಖಜಾಂಜಿ ಪ್ರಶಾಂತ್ ಹೊಳ್ಳ, ಬೆಂಗಳೂರಿನ ಗೋಪಾಲ ಶಬರಾಯ, ಸಿ.ಎ. ಗಣೇಶ್ ಹೆಬ್ಬಾರ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್. ಉಪಸ್ಥಿತರಿದ್ದರು.
ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಜಿ.ಎಸ್ ಚಂದ್ರಶೇಖರ್ ಸ್ವಾಗತಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಸುಕುಮಾರ್ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಪೂರ್ವ ಓಸ್ತಾ ಕಾರ್ಯಕ್ರಮ ನಿರೂಪಿಸಿದರು.