ಕಟ್ಟಡದಿಂದ ಆಯಾತಪ್ಪಿ ಬಿದ್ದ ಯುವಕನಿಗೆ ಗಂಭೀರ ಗಾಯ
ಉಡುಪಿ,ಏ.12: ಕಲ್ಸಂಕ ಸಮೀಪ ಪಾಳುಬಿದ್ದಿರುವ ಬಹುಮಹಡಿ ಕಟ್ಟಡದಿಂದ ಸುಮಾರು 25 ಅಡಿ ಎತ್ತರದಿಂದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ಗಾಯಾಳನ್ನು ಉತ್ತರಖಂಡ ರಾಜ್ಯದ ಸೂರತ್ ಸಿಂಗ್ ರಾವತ್ (35) ಎಂದು ಗುರುತಿಸಲಾಗಿದೆ. ಯುವಕನ ಕುತ್ತಿಗೆ, ಬೆನ್ನು ಮೂಳೆ ಮುರಿತ ಗೊಳಗಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು ಆತನನ್ನು ರಕ್ಷಿಸಿ, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಕನಕಮಹಲ್ ಹೆಸರಿನಿಂದ ಕರೆಯಲ್ಪಡುವ ನಿರ್ಮಾಣ ಹಂತದಲ್ಲಿಯೇ ಪಾಳು ಬಿದ್ದಿರುವ ಈ ಕಟ್ಟಡದಲ್ಲಿ ಅಸಹಜವಾಗಿ ಸಾವನಪ್ಪಿದ ಕೊಳೆತ ಶವಗಳು, ಪತ್ತೆಯಾಗಿರುವ ಹಲವಾರು ಘಟನೆಗಳು ನಡೆದಿವೆ. ಅಲ್ಲದೆ ಈ ಸ್ಥಳದಲ್ಲಿ ಅನೈತಿಕ ಚಟುವಟಿಕೆಗಳು, ವೈಶ್ಯವಾಟಿಕೆ ನಡೆಯುತ್ತಿರುವ ಬಗ್ಗೆಯೂ ಸಾರ್ವಜನಿಕ ರಿಂದ ದೂರುಗಳು ಕೇಳಿಬಂದಿವೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕೆಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.