ಮಳೆಗಾಲದಲ್ಲಿ ವಿಪತ್ತು ನಿರ್ವಹಣೆಗೆ ಅಗತ್ಯ ಕ್ರಮ ವಹಿಸಿ: ಶಾಸಕ ಯಶ್ಪಾಲ್ ಸುವರ್ಣ ಸೂಚನೆ

ಉಡುಪಿ, ಎ.15: ಮಳೆಗಾಲದ ತುರ್ತು ಸಂದರ್ಭಗಳಲ್ಲಿ ಪ್ರಾಕೃತಿಕ ವಿಕೋಪದ ವಿಪತ್ತು ನಿರ್ವಹಣೆಗೆ ಇಲಾಖೆಯ ಅಧಿಕಾರಿಗಳು ಸೂಕ್ತ ಪೂರ್ವ ತಯಾರಿ ನಡೆಸಿ ತುರ್ತಾಗಿ ಸ್ಪಂದಿಸುವಂತೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಡುಪಿ ನಗರಸಭೆ ಸಭಾಂಗಣದಲ್ಲಿ ಉಡುಪಿ ನಗರಸಭೆ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಗಳೊಂದಿಗೆ ಮಳೆಗಾಲದ ಪೂರ್ವಸಿದ್ಧತೆ ಬಗ್ಗೆ ಚರ್ಚಿಸಲು ಕರೆದ ಸಭೆಯಲ್ಲಿ ಅವರು ಮಾತನಾಡಿದರು.
ವಿದ್ಯುತ್ ಲೈನ್‌ಗೆ ಹತ್ತಿರವಿರುವ ಮರದ ಗೆಲ್ಲುಗಳ ತೆರವು, ಅಪಾಯಕಾರಿ ಸ್ಥಿತಿಯಲ್ಲಿರುವ ವಿದ್ಯುತ್ ತಂತಿ ಹಾಗೂ ಕಂಬಗಳನ್ನು ಬದಲಾಯಿಸಿ ಮಳೆಗಾಲದ ಸಂದರ್ಭದಲ್ಲಿ ತುರ್ತು ನಿರ್ವಹಣೆಗೆ ಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಿಸಲು ಮೆಸ್ಕಾಂ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವಿಗೆ ಕ್ರಮ ಹಾಗೂ ತುರ್ತು ಸಂದರ್ಭದಲ್ಲಿ ವಿಶೇಷ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸನ್ನದ್ಧರಾಗಿರುವಂತೆ ತಿಳಿಸಿದ ಅವರು ಸಣ್ಣ ನೀರಾವರಿ ಇಲಾಖೆಯ ಮೂಲಕ ಮಳೆಗಾಲದ ಆರಂಭಕ್ಕೂ ಮುನ್ನ ರಾಜ ಕಾಲುವೆ ಹಾಗೂ ತೋಡುಗಳ ಹೂಳನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ಕ್ರಮ ವಹಿಸಿ ಕೃತಕ ನೆರೆ ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಆರೋಗ್ಯ ಇಲಾಖೆಯ ಮೂಲಕ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಶಾಲಾ ಕಾಲೇಜು, ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿ ಗಳಿಗೆ ಸ್ವಚ್ಛತೆ ಕಾಪಾಡುವ ಬಗ್ಗೆ ಮಾಹಿತಿ ನೀಡಿ, ತುರ್ತು ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ಸಮರ್ಪಕ ನಿರ್ವಹಣೆ, ರಸ್ತೆ ಬದಿಯ ಚರಂಡಿ ನೀರು ಸರಾಗವಾಗಿ ಹರಿಯಲು ಹಾಗೂ ರಸ್ತೆ ಬದಿ ಹುಲ್ಲು ಕಳೆಗಳ ತೆರವಿಗೆ ಅಧಿಕಾರಿಗಳಿಗೆ ತಿಳಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳು ಮಳೆಗಾಲದ ಪ್ರಾಕೃತಿಕ ವಿಕೋಪದಿಂದ ಸಾರ್ವಜನಿಕರ ಆಸ್ತಿ ಪಾಸ್ತಿಗೆ ನಷ್ಟ ಸಂಭವಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಡಳಿತಕ್ಕೆ ಹಾನಿಯ ಬಗ್ಗೆ ವರದಿ ನೀಡಿ ಗರಿಷ್ಠ ಪರಿಹಾರ ಒದಗಿಸಲು ಸಹಕರಿಸಬೇಕು ಎಂದರು.
ನಗರಸಭಾ ವ್ಯಾಪ್ತಿಯಲ್ಲಿ ಈಗಾಗಲೇ ಟೆಂಡರ್ ಅಂತಿಮಗೊಂಡಿರುವ ಮೂಲ ಸೌಕರ್ಯ ಕಾಮಗಾರಿ ಗಳನ್ನು ಮಳೆಗಾಲ ಆರಂಭಕ್ಕೂ ಮುನ್ನ ಶೀಘ್ರ ಪ್ರಾರಂಭ ಮಾಡುವಂತೆ ಸೂಚಿಸಿದರಲ್ಲದೇ, ಕಲ್ಸಂಕ ಜಂಕ್ಷನ್ ಬಳಿ ಸ್ಟೀಲ್ ಬ್ರಿಡ್ಜ್ ಕಾಮಗಾರಿ ಹಾಗೂ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ವಿಶೇಷ ಮುತುವರ್ಜಿ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರಸಭೆ ಮೂಲಕ ತುರ್ತು ಸಂದರ್ಭದಲ್ಲಿ ವಿಶೇಷ ಕಾರ್ಯಾಚರಣೆಗೆ ಸಿಬ್ಬಂದಿಗಳ ತಂಡ ರಚಿಸಿ, ಕಾರ್ಯಾಚರಣೆಗೆ ಪೂರಕ ಅಗತ್ಯ ಸಾಮಗ್ರಿಗಳನ್ನು ಒದಗಿಸಲು ಸೂಚನೆ ನೀಡಿ, ತುರ್ತು ಸಂದರ್ಭದಲ್ಲಿ ಮಾಹಿತಿ ನೀಡಲು ನಗರಸಭೆ ಮೂಲಕ ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಂ ಆರಂಭಿಸಲು ಕ್ರಮ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ನಗರಸಭೆ ಸದಸ್ಯರು, ಆರೋಗ್ಯ, ಸಣ್ಣ ನೀರಾವರಿ, ಅರಣ್ಯ, ಲೋಕೋಪಯೋಗಿ, ಮೆಸ್ಕಾಂ, ಕಂದಾಯ ಇಲಾಖೆ ಹಾಗೂ ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.