ಉಡುಪಿ: ಬೀಡಿ ಕಾರ್ಮಿಕರ ವೇತನ, ತುಟ್ಟಿಭತ್ಯೆ ಕಡಿತಕ್ಕೆ ಪ್ರತಿಭಟನೆ

ಉಡುಪಿ, ಎ.15: ಬೀಡಿ ಕಾರ್ಮಿಕರ ಕನಿಷ್ಟ ವೇತನ ಹಾಗೂ ತುಟ್ಟಿಭತ್ಯೆ ಯನ್ನು ಕಡಿತಗೊಳಿಸಿದ ಸರಕಾರದ ಕ್ರಮವನ್ನು ಖಂಡಿಸಿ, ಈ ಕುರಿತ ಆದೇಶ ವಾಪಸ್ಸಾತಿಗೆ ಒತ್ತಾಯಿಸಿ ಇಂದು ಬೀಡಿ ಎಂಡ್ ಟ್ಯೊಬ್ಯಾಕೋ ಲೇಬರ್ ಯೂನಿಯನ್ ನೇತೃತ್ವದಲ್ಲಿ ಉಡುಪಿಯ ತಹಶಿಲ್ದಾರರ ಕಛೇರಿ ಮುಂದೆ ಸರಕಾರದ ಆದೇಶ ಪ್ರತಿ ಸುಟ್ಟು ಹಾಕಿ ಪ್ರತಿಭಟನೆ ನಡೆಸಲಾಯಿತು.
ಬಡ ಬೀಡಿ ಕಾರ್ಮಿಕರ ಹಿತರಕ್ಷಣೆ ಮಾಡಬೇಕಾದ ಕರ್ನಾಟಕ ಸರಕಾರ ಬೀಡಿ ಮಾಲಕರ ಹಿತರಕ್ಷಣೆಗೆ ಮುಂದಾಗಿರುವುದನ್ನು ಪ್ರತಿಭಟನಕಾರರು ಖಂಡಿಸಿದರು. ಬೀಡಿ ಕಾರ್ಮಿಕರಿಗೆ ತುಟ್ಟಿಭತ್ಯೆ, ನಿಗದಿತ ಕನಿಷ್ಠ ವೇತನ ಪಾವತಿಸದೇ ದುಡಿದ ಕಾರ್ಮಿಕರಿಗೆ ವೇತನ ಬಾಕಿ ಮಾಡಿರುವ ಬೀಡಿ ಮಾಲಕರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸರಕಾರ ವಿಫಲವಾಗಿದೆ ಎಂದವರು ದೂರಿದರು.
ಕಳೆದ ಮಾರ್ಚ್ 20ರಂದು ಹೊರಡಿಸಿದ ಹೊಸ ಕನಿಷ್ಠ ವೇತನದ ಆದೇಶ ಬೀಡಿ ಮಾಲಕರಿಗೆ ಕಾರ್ಮಿಕ ರನ್ನು ವಂಚಿಸಲು ಅನುಕೂಲವಾಗುವಂತಿದೆ ಎಂದು ಆರೋಪಿಸಿದ ಅವರು, ಸಮಿತಿಯ ಅಂದಿನ ಸದಸ್ಯರ ಒಪ್ಪಿಗೆ ಪಡೆಯದೇ ಮರು ಆದೇಶ ಮಾಡಿರುವುದು ಕಾನೂನು ಉಲ್ಲಂಘನೆ ಯಾಗುತ್ತದೆ ಎಂದು ಹೇಳಿದರು.
ಆದುದರಿಂದ ರಾಜ್ಯ ಸರಕಾರ ಮಾ.20ರ ಕಾರ್ಮಿಕ ವಿರೋಧಿ ಆದೇಶವನ್ನು ಹಿಂದಕ್ಕೆ ಪಡೆದು, 2018ರ ಆದೇಶವನ್ನು ಊರ್ಜಿತದಲ್ಲಿಟ್ಟು ಮರು ಆದೇಶ ಮಾಡಬೇಕು. ಬೀಡಿ ಮಾಲಕರಿಂದ ಕಳೆದ ಏಳು ವರ್ಷಗಳಿಂದ ಬಾಕಿ ಇರುವ ಎಲ್ಲಾ ಡಿಎ ಹಾಗೂ ವೇತನಗಳನ್ನು ಕೂಡಲೇ ಕಾರ್ಮಿಕರಿಗೆ ತೆಗೆಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ನಂತರ ತಮ್ಮ ಬೇಡಿಕೆಗಳನ್ನೊಳಗೊಂಡ ಮನವಿ ಪತ್ರವನ್ನು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿ ಹಾಗೂ ಕಾರ್ಮಿಕ ಸಚಿವರಿಗೆ ನೀಡಲಾಯಿತು.
ಇಂದಿನ ಪ್ರತಿಭಟನಾ ಸಭೆಯಲ್ಲಿ ಬೀಡಿ ಎಂಡ್ ಟೊಬ್ಯಾಕೋ ಲೇಬರ್ ಯೂನಿಯನ್ ಅಧ್ಯಕ್ಷರಾದ ನಳಿನಿ ಎಸ್., ಪ್ರಧಾನ ಕಾರ್ಯದರ್ಶಿ ಉಮೇಶ್ ಕುಂದರ್, ಅಖಿಲ ಭಾರತ ಬೀಡಿ ಫೆಡರೇಶನ್ ಯೂನಿಯನ್ ಕೇಂದ್ರ ಸಮಿತಿ (ದೆಹಲಿ) ಸದಸ್ಯ ಕವಿರಾಜ್ ಎಸ್.ಕಾಂಚನ್, ಸಿಐಟಿಯು ಉಡುಪಿ ಜಿಲ್ಲಾ ಕೋಶಾಧಿ ಕಾರಿ ಶಶಿಧರ ಗೊಲ್ಲ, ಸಮಿತಿ ಸದಸ್ಯರಾದ ಗಿರಿಜ, ವಸಂತಿ, ಶಾರದ ಮುಂತಾದವರು ಉಪಸ್ಥಿತರಿದ್ದರು.