ಜಾನಪದ ತಜ್ಞ ಪ್ರೊ.ಹಿ.ಚಿ. ಬೋರಲಿಂಗಯ್ಯರಿಗೆ ಜಾನಪದ ರತ್ನ ಪ್ರಶಸ್ತಿ

ಉಡುಪಿ, ಎ.15: ಬಯಲು ಸೀಮೆಯ ಮೂಡಲಪಾಯ, ಉತ್ತರ ಕರ್ನಾಟಕದ ಶ್ರೀಕೃಷ್ಣ ಪಾರಿಜಾತಾ ಮೊದಲಾದ ಕಲಾಪ್ರಕಾರಗಳು ಸೂಕ್ತ ಪ್ರೋತ್ಸಾಹವಿಲ್ಲದೆ ಅಳಿವಿನಂಚಿನಲ್ಲಿವೆ. ಆದರೆ ಕರಾವಳಿಯ ಯಕ್ಷಗಾನ ಇಂದು ವಿಶ್ವದರ್ಜೆಯ ಕಲೆಯಾಗಿ ಮೆರೆಯುವಂತೆ ಮಾಡಿದ ಇಲ್ಲಿನ ವಿದ್ಯಾವಂತರು, ಕಲಾ ಪ್ರೋತ್ಸಾಹಕರು ಅಭಿನಂದನಾರ್ಹರು ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದ್ದಾರೆ.
ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಭೂಮಿಕಾ ಹಾರಾಡಿ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ‘ಬಣ್ಣ 11’ ಪಂಚದಿನ ನಾಟಕೋ ತ್ಸವದಲ್ಲಿ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕೊಡ ಮಾಡುವ 2025ನೇ ಸಾಲಿನ ’ತಲ್ಲೂರ್ಸ್ ಜಾನಪದ ರತ್ನ ಪ್ರಶಸ್ತಿ’ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಬಯಲು ಸೀಮೆಯಲ್ಲಿ ಇಲ್ಲಿನ ಯಕ್ಷಗಾನದಂತೆ ಮೂಡಲಪಾಯ ಯಕ್ಷಗಾನವಿತ್ತು. ಆದರೆ ಅದು ಇಂದು ಬಹುತೇಕ ಅಳಿವಿನಂಚಿನಲ್ಲಿದೆ. ಉತ್ತರ ಕರ್ನಾಟಕದ ಶ್ರೀಕೃಷ್ಣ ಪಾರಿಜಾತ ಕೂಡಾ ನಾಮವಶೇಷವಾಗಿ ಹೋಗಿದೆ. ಆದರೆ ಕರಾವಳಿಯಲ್ಲಿ ಯಕ್ಷಗಾನವನ್ನು ವಿಶ್ವದರ್ಜೆಯ ಪ್ರಮುಖ ಕಲೆ ಎಂದು ವಿಶ್ವದಾದ್ಯಂತ ಪರಿಗಣಿಸುವ ಹಾಗೆ ಕರಾವಳಿಯ ಜನತೆ ಮಾಡಿದ್ದಾರೆ. ಆದಕ್ಕೆ ಕಾರಣ ಇಲ್ಲಿನ ವಿದ್ಯಾವಂತರು ಆಸಕ್ತಿಯಿಂದ ಕಲೆಗೆ ಪ್ರವೇಶ ಮಾಡಿರುವುದು ಎಂದು ಪ್ರೊ.ಬೋರಲಿಂಗಯ್ಯ ಅಭಿಪ್ರಾಯ ಪಟ್ಟರು.
ಕರಾವಳಿ ಸೊಗಡು: ಕರಾವಳಿಯ ಸಂಪ್ರದಾಯದಂತೆ ಅಕ್ಕಿಮುಡಿ, ಬಾಳೆಗೊನೆ, ಅಡಿಕೆಗೊನೆ, ಸಿಯಾಳಗೊನೆ, ಹಿಂಗಾರ, ವೀಳ್ಯದೆಲೆ ನೀಡಿ, ಬೆಳ್ಳಿಯ ಪ್ರಶಸ್ತಿ ಫಲಕದೊಂದಿಗೆ ಪ್ರೊ.ಹಿ.ಚಿ. ಬೋರಲಿಂಗಯ್ಯ ಅವರಿಗೆ ತಲ್ಲೂರ್ಸ್ ಜಾನಪದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಭೂಮಿಕಾ ಹಾರಾಡಿ ಸಹಕಾರದಲ್ಲಿ ಪ್ರತೀ ವರ್ಷ ಬಣ್ಣ ನಾಟಕೋತ್ಸವದಲ್ಲಿ ಜಾನಪದ ಪರಿಷತ್ತಿನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಸಲ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯರಿಗೆ ಈ ಜಾನಪದ ಗೌರವ ನೀಡುತ್ತಿರುವುದು ಸಂತೋಷ ತಂದಿದೆ ಎಂದರು.
ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್, ರೋಟರಿ ಕ್ಲಬ್‌ನ ಜ್ಞಾನವಸಂತ ಶೆಟ್ಟಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಾನಪದ ಪರಿಷತ್ತಿನ ಕಾರ್ಯದರ್ಶಿ ರವಿರಾಜ ನಾಯಕ್, ಸಂಘಟನಾ ಕಾರ್ಯದರ್ಶಿ ಗೋಪಾಲ ಸಿ.ಬಂಗೇರ, ಖಜಾಂಚಿ ಪ್ರಶಾಂತ್ ಭಂಡಾರಿ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ ಉಡುಪಿ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ರೋಟರಿ ಸಹಾಯಕ ಗವರ್ನರ್ ಆರ್.ಎಂ.ಸಾಮಗ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್‌ನ ಗಿರಿಜಾ ಶಿವರಾಮ ಶೆಟ್ಟಿ, ತಲ್ಲೂರು ಶಿವಪ್ರಸಾದ್ ಶೆಟ್ಟಿ, ಅನುಷಾ ಆಚಾರ್ಯ ಉಪಸ್ಥಿತರಿದ್ದರು.
ಕರ್ನಾಟಕ ಜಾನಪದ ಪರಿಷತ್ ಕಾರ್ಯದರ್ಶಿ ರವಿರಾಜ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಭೂಮಿಕಾ ಹಾರಾಡಿ ಸಂಸ್ಥೆಯ ರವಿ ಎಸ್. ಪೂಜಾರಿ ಸ್ವಾಗತಿಸಿದರು. ಅಧ್ಯಕ್ಷ ರಾಮ ಶೆಟ್ಟಿ ವಂದಿಸಿದರು.