ತುಳು ಕಾಲಮಾನದ ‘ಕಾಲಕೋಂದೆ’ ಕ್ಯಾಲಂಡರ್ ಬಿಡುಗಡೆ

ಉಡುಪಿ, ಎ.15: ಕರ್ನಾಟಕ ಕರಾವಳಿಯ ‘ತುಳುನಾಡು’ನಲ್ಲಿ ಎ.14ರ ಸೋಮವಾರದಂದು ಸೌರಮಾನ ಯುಗಾದಿಯೊಂದಿಗೆ ತುಳುವರ ಹೊಸ ವರ್ಷದ ಆಚರಣೆಯೂ ನಡೆಯಿತು. ಇದೇ ಸಂದರ್ಭದಲ್ಲಿ ಇಲ್ಲಿನ ಜೈ ತುಳುನಾಡು ಸಂಘಟನೆ ತುಳು ಕಾಲಮಾನದ ಪ್ರಕಾರ ತಯಾರಿಸಿರುವ ‘ಕಾಲಕೋಂದೆ’ ಕ್ಯಾಲಂಡರ್‌ನ್ನು ಬಿಡುಗಡೆಗೊಳಿಸಲಾಯಿತು.
ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹಾಗೂ ತುಳುನಾಡಿನ ಅಳುಪರ ವಂಶಸ್ಥರಾಗಿರುವ ಡಾ.ಆಕಾಶ್‌ರಾಜ್ ಜೈನ್ ಅವರು ‘ಕಾಲಕೋಂದೆ’ ಕ್ಯಾಲಂಡರ್‌ನ್ನು ಬಿಡುಗಡೆಗೊಳಿಸಿದರು.
ತುಳು ಕಾಲಮಾನದಂತೆ ಯುಗಾದಿಯೊಂದಿಗೆ ತುಳುವರ ಹೊಸ ವರ್ಷ (ಎಪ್ರಿಲ್ ಮಧ್ಯಭಾಗದಲ್ಲಿ) ಪ್ರಾರಂಭಗೊಳ್ಳುತ್ತದೆ. ಇದೇ ಮೊದಲ ಬಾರಿಗೆ ಜೈ ತುಳುನಾಡು ಸಂಘಟನೆ ಉಡುಪಿ ಘಟಕ ತುಳು ದಿನಾಂಕ ಹಾಗೂ ಮಾಸದೊಂದಿಗೆ ನಮೂದಿಸಿದ ಈ ಕ್ಯಾಲೆಂಡರ್‌ನ್ನು ತಯಾರಿಸಿದೆ. ಕ್ಯಾಲೆಂಡರ್‌ನಲ್ಲಿ ತುಳು ಭಾಷೆಯಲ್ಲಿ ದಿನಾಂಕ ಹಾಗೂ ಆಚರಣೆಗಳನ್ನು ನಮೂದಿಸಲಾಗಿದೆ.
ಇದರಂತೆ ಪ್ರತಿ ತಿಂಗಳ ಆರಂಭದ ದಿನವು ಸಂಕ್ರಾಂತಿಯ ಮರುದಿನವಾ ಗಿರುತ್ತದೆ. ಈ ಮೊದಲ ದಿನ ವನ್ನು ತುಳುವಿನಲ್ಲಿ ‘ಸಿಂಗೊಡೆ’ ಎಂದು ಕರೆಯುತ್ತಾರೆ. ಈ ಸೌರಮಾನ ಯುಗಾದಿಯಿಂದ ಮುಂದಿನ ಸೌರಮಾನ ಯುಗಾದಿಯವರೆಗೆ ತುಳುವರ ಒಂದು ವರ್ಷ ಪೂರ್ಣಗೊಳ್ಳುತ್ತದೆ. ತುಳುವರ 12 ತಿಂಗಳು ಗಳೆಂದರೆ ಪಗ್ಗು, ಬೇಸ, ಕಾರ್ತೆಲ್, ಆಟಿ, ಸೋನ, ನಿರ್ನಾಲ್(ಕನ್ಯಾ), ಬೊಂತೆಲ್, ಜಾರ್ದೆ, ಪೆರಾರ್ದೆ, ಪುಯಿಂತೆಲ್ (ಪೊನ್ನಿ), ಮಾಯಿ ಹಾಗೂ ಸುಗ್ಗಿ.
ಯುವ ಪೀಳಿಗೆಗೆ ಹಾಗೂ ತೌಳವ ಸಮಾಜಕ್ಕೆ ತಮ್ಮ ಸಂಸ್ಕಾರದ ಅರಿವು ಹಾಗೂ ತುಳು ತಿಂಗಳಿನ ಮೂಲಕ ತಮ್ಮ ಸಂಸ್ಕೃತಿಯ ಒಲವನ್ನು ಬೆಳೆಸುವ ಉದ್ದೇಶದೊಂದಿಗೆ ಕಾಲಕೋಂದೆ ಕ್ಯಾಲೆಂಡರ್‌ನ್ನು ಪ್ರಶಾಂತ್ ಕುಂಜೂರು ವಿನ್ಯಾಸಗೊಳಿಸಿದ್ದಾರೆ ಎಂದು ಜೈ ತುಳುನಾಡು ಉಡುಪಿ ಘಟಕದ ಅಧ್ಯಕ್ಷೆ ಸುಶೀಲಾ ಜಯಕರ್ ತಿಳಿಸಿದರು.
ಈ ವಿಶಿಷ್ಟ ಕ್ಯಾಲೆಂಡರ್‌ನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ.ಆಕಾಶ್ ರಾಜ್ ಜೈನ್, ತುಳುವಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರಕಲು ಜೈ ತುಳು ನಾಡು ಸಂಘಟನೆಯ ಈ ಪ್ರಯತ್ನ ವಿಶೇಷ ಒತ್ತು ನೀಡಲಿದೆ. ಮುಂದಿನ ದಿನಗಳಲ್ಲಿ ಸಂಘಟನೆ ತುಳು ಪಂಚಾಂಗ ರಚಿಸುವ ಪ್ರಯತ್ನಕ್ಕೂ ಮುಂದಾಗಲಿ ಎಂದು ಹಾರೈಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೈ ತುಳುನಾಡು ಸಂಘಟನೆಯ ಸಂತೋಷ್ ಎನ್. ಎಸ್.ಕಟಪಾಡಿ, ಪ್ರಶಾಂತ್ ಕುಂಜೂರು, ಶರತ್‌ಕುಮಾರ್ ಕೊಡವೂರು ಉಪಸ್ಥಿತರಿದ್ದರು.