ಕಲುಷಿತ ನೇತ್ರಾವತಿ| ಹೋರಾಟಕ್ಕೆ ಜಯಶ್ರೀಕೃಷ್ಣ ಪರಿಸರ ಸಮಿತಿ ಸಜ್ಜು: ಜಯಕೃಷ್ಣ ಶೆಟ್ಟಿ

ಉಡುಪಿ, ಎ.18: ಬಂಟ್ವಾಳ ಮತ್ತು ಮಂಗಳೂರು ನಗರಗಳಿಗೆ ಕುಡಿಯುವ ನೀರಿನ ಸರಬರಾಜು ಮಾಡುವ ಬಹೃತ್ ನೇತ್ರಾವತಿ ನದಿ ಕಲುಷಿತಗೊಳ್ಳುತ್ತಿದ್ದು, ಈ ಬಗ್ಗೆ ಸರಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಭಿಯಾನವನ್ನು ನಡೆಸಲಿದೆ ಎಂದು ಮುಂಬಯಿ ಮೂಲದ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಯಕೃಷ್ಣ ಶೆಟ್ಟಿ, ಈ ಕುರಿತಂತೆ ಮೇ ತಿಂಗಳ ಕೊನೆಯ ವಾರದಲ್ಲಿ ಮಂಗಳೂರಿನಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಸಮಿತಿಯ ನಿಯೋಗವೊಂದು ಸದ್ಯದಲ್ಲಿಯೇ ರಾಜ್ಯದ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿ ಕಲುಷಿತ ಗೊಳ್ಳುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿಯ ಸ್ವಚ್ಛತೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು. ಅಲ್ಲದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ರಾಜ್ಯದ ಸಮಸ್ತ ನದಿಗಳ ರಕ್ಷಣೆಗೆ ಮುಂದಾಗುವಂಎ ಬೇಡಿಕೆಯನ್ನು ಮಂಡಿಸಲಾಗುವುದು ಎಂದರು.
ನೇತ್ರಾವತಿ ನದಿ ಕಲುಷಿತವಾಗದಂತೆ ತಡೆಯಲು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಭಿಯಾನ ಪ್ರಾರಂಭಿಸಲಿದೆ. ಇದಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಲು ಸದ್ಯದಲ್ಲೇ ಸಾಂಕೇತಿಕ ಪ್ರತಿಭಟನೆ ಮಾಡಲಾಗುವುದು. ಅದೇ ರೀತಿ ಅವಳಿ ಜಿಲ್ಲೆಗಳ ಜಿಲ್ಲೆಗಳ ಸಮುದ್ರ ತೀರದ ಸ್ವಚ್ಛತೆಯ ಕುರಿತಂತೆಯೂ ಸಮಿತಿ ವಿಶೇಷ ಗಮನ ಹರಿಸಲಿದೆ ಎಂದವರು ಹೇಳಿದರು.
ಅವಳಿ ಜಿಲ್ಲೆಗೆ 24ಗಂಟೆ ವಿದ್ಯುತ್: ಉಡುಪಿ ಜಿಲ್ಲೆಯ ಪಡುಬಿದ್ರಿ ಬಳಿ ಕಾರ್ಯಾಚರಿಸುತ್ತಿರುವ ಅದಾನಿ ಕಂಪೆನಿಯ ಉಷ್ಣ ವಿದ್ಯುತ್ ಸ್ಥಾವರದಿಂದ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ದಿನದ 24ಗಂಟೆಗಳ ಕಾಲವೂ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಬಗ್ಗೆ ಸಮಿತಿ ನಡೆಸುತ್ತಿರುವ ಹೋರಾಟಕ್ಕೆ ರಾಜ್ಯ ಸರಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ಜಯಕೃಷ್ಣ ಶೆಟ್ಟಿ ನುಡಿದರು.
ಪಡುಬಿದ್ರಿ ಬಳಿಯ ನಂದಿಕೂರಿನಲ್ಲಿ 2010ರಿಂದ ಕಾರ್ಯಾಚರಿಸುತ್ತಿರುವ ಈ ಉಷ್ಣ ವಿದ್ಯುತ್ ಸ್ಥಾವರ ಪ್ರಸ್ತುತ 1300 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿದೆ. ಇದರಿಂದ ರಾಜಧಾನಿ ಬೆಂಗಳೂರಿಗೆ ಶೇ 45ರಷ್ಟು ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೇ ಈ ಸ್ಥಾವರ ಅಸ್ತಿತ್ವದಲ್ಲಿರುವ, ಇದಕ್ಕಾಗಿ ಸಾಕಷ್ಟು ತ್ಯಾಗ ಮಾಡಿರುವ ಉಡುಪಿ ಜಿಲ್ಲೆ ಸೇರಿದಂತೆ ಅವಳಿ ಜಿಲ್ಲೆಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದಕ್ಕೆ ನಮ್ಮ ಸಮಿತಿಯ ವಿರೋಧವಿದೆ ಎಂದವರು ಹೇಳಿದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿರುವ ವಿದ್ಯುತ್ ಮೊದಲು ಪೂರೈಕೆ ಮಾಡಿ, ನಂತರ ಉಳಿದ ಕಡೆಗಳಿಗೆ ವಿದ್ಯುತ್ ನೀಡಬಹುದು ಎಂಬುದು ಈ ಯೋಜನೆಯ ಅನುಷ್ಠಾನದಲ್ಲಿ ಸತತವಾಗಿ ಹೋರಾಟ ನಡೆಸಿಕೊಂಡು ಬಂದಿರುವ ಸಮಿತಿಯ ಪ್ರಮುಖ ಬೇಡಿಕೆಯಾಗಿದೆ ಎಂದೂ ಅವರು ವಿವರಿಸಿದರು.
ಈ ಬಗ್ಗೆ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್, ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸರಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮಾಜಿ ಸಿಎಂಗಳಾದ ವೀರಪ್ಪ ಮೊಯ್ಲಿ, ಸದಾನಂದ ಗೌಡ ಅವರನ್ನು ಭೇಟಿಯಾಗಿ ಚರ್ಚಿಸಲಾಗಿದೆ.
ಸ್ಪೀಕರ್ ಯು.ಟಿ. ಖಾದರ್ ಅವರು ಈಗಾಗಲೇ ಇಂಧನ ಸಚಿವರಿಗೆ ಪತ್ರ ಬರೆದು ಸಮಿತಿಯ ಬೇಡಿಕೆಯನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ ಎಂದು ಜಯಕೃಷ್ಣ ಶೆಟ್ಟಿ ತೋನ್ಸೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್, ಉಪಾಧ್ಯಕ್ಷರಾದ ಕೆ.ಪಿ.ಜಗದೀಶ್ ಅಧಿಕಾರಿ, ಅರುಣ್‌ಪ್ರಕಾಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.