ಬಡ ಕೊರಗ ಕುಟುಂಬದ ಮನೆ ಧ್ವಂಸ: ಆರೋಪ
ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದಿಂದ ಹೋರಾಟದ ಎಚ್ಚರಿಕೆ

ಕೊಲ್ಲೂರು, ಎ.18: ಕೊಲ್ಲೂರು ಗ್ರಾಮದ ಕಲ್ಯಾಣಿಗುಡ್ಡೆ ಕೊರಗ ಸಮುದಾಯದ ಗಂಗೆ ಕೊರಗ ಎಂಬವರು ಕಳೆದ 40 ವರ್ಷಗಳಿಂದ ವಾಸವಾಗಿರುವ ಮನೆಯನ್ನು ಯಾವುದೇ ಮಾಹಿತಿ ನೀಡದೆ ಏಕಾಏಕಿ ಕೆಡವಿರುವುದಾಗಿ ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ -ಕೇರಳ ಇದರ ಅಧ್ಯಕ್ಷೆ ಸುಶೀಲಾ ನಾಡ ಆರೋಪಿಸಿದ್ದಾರೆ.
ದಿವಂಗತ ರಾಮ ಕೊರಗರ ಪತ್ನಿ ಗಂಗೆ ತನ್ನ ಎರಡು ಮಕ್ಕಳ ಜೊತೆ ಈ ಮನೆಯಲ್ಲಿ ವಾಸವಾಗಿದ್ದು, ಕೆಲವರು ಯಾವುದೇ ಮಾಹಿತಿ ನೀಡದೆ ಏಕಾಏಕಿ ಅಕ್ರಮವಾಗಿ ಮನೆಯ ಒಳಗೆ ಪ್ರವೇಶಿಸಿ ಮನೆಯಲ್ಲಿ ದ್ದಂತಹ ಜಿನಸಿ ಸಾಮಾಗ್ರಿಗಳನ್ನು, ಬಟ್ಟೆ ಬರೆಗಳನ್ನು ಚೆಲ್ಲಪಿಲ್ಲಿ ಮಾಡಿದರು. ಬಳಿಕ ಜೆಸಿಬಿ ತಂದು ಮನೆಯನ್ನು ಕೆಡವಿದ್ದಾರೆ ಎಂದು ಅವರು ದೂರಿದ್ದಾರೆ.
ಇದೀಗ ಗಂಗಮ್ಮ ಸೂರಿಲ್ಲದೆ ಕೊರಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣಕರ್ತರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಈ ಘಟನೆ ನಡೆದು ಇಂದಿಗೆ ಎರಡು ದಿನಗಳಾದರೂ ಜಿಲ್ಲಾಡಳಿತ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಇದೀಗ ಮಳೆಗಾಲ ಆರಂಭವಾಗುವ ಸಮಯ ಆಗಿರುವುದರಿಂದ ಸಂಬಂಧಪಟ್ಟ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಒಕ್ಕೂಟದ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.