ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಅಮೃತ ಮಹೋತ್ಸವ

ಉಡುಪಿ, ಎ.25: ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ 75ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ಅಮೃತ ಮಹೋತ್ಸವ ಸಮಿತಿ ಹಾಗೂ ಕಾರ್ಯಾಲಯದ ಉದ್ಘಾಟನೆ ಎ.27ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನ ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1950ರಲ್ಲಿ ಪ್ರಾರಂಭ ಗೊಂಡ ಹಿರಿಯಡಕ ಬೋರ್ಡ್ ಹೈಸ್ಕೂಲ್ 1975ರಲ್ಲಿ ಪದವಿ ಪೂರ್ವ ಕಾಲೇಜು ಆಗಿ ಪರಿವರ್ತನೆ ಗೊಂಡಿತು. ಪ್ರಸ್ತುತ 2020ರಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಘೋಷಣೆಗೊಂಡು ಪೂರ್ವ ಪ್ರಾಥಮಿಕ ದಿಂದ ಪದವಿ ಪೂರ್ವ ಕಾಲೇಜಿನವರೆಗೆ ಸುಮಾರು 2000 ವಿದ್ಯಾರ್ಥಿಗಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡುತ್ತಿದೆ ಎಂದರು.
ಇಲ್ಲಿ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣದಿಂದ ವಿದ್ಯಾರ್ಥಿಗಳನ್ನು ಇದು ಆಕರ್ಷಿಸುತ್ತಿದೆ. 2026ರ ಜನವರಿ ತಿಂಗಳಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆಗೊಂಡು ವರ್ಷವಿಡೀ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಣೆಗೊಳ್ಳಲಿದೆ ಎಂದು ಸುರೇಶ್ ನಾಯಕ್ ಹೇಳಿದರು.
ಇದಕ್ಕಾಗಿ ಅಮೃತ ಮಹೋತ್ಸವ ಸಮಿತಿಯನ್ನು ರಚಿಸಲಾಗಿದೆ. ಸಮಿತಿ ಹಾಗೂ ಕಾರ್ಯಾಲಯವನ್ನು ಎ.27ರಂದು ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಲಿದ್ದಾರೆ. ಕೃಷಿ ಅರ್ಥಶಾಸ್ತ್ರಜ್ಞ ಡಾ.ಎನ್.ಎಸ್.ಶೆಟ್ಟಿ, ಸಮಿತಿ ಗೌರವಾಧ್ಯಕ್ಷ ಎ.ಬಾಲಕೃಷ್ಣ ಶೆಟ್ಟಿ ಬೆಂಗಳೂರು, ಪಳ್ಳಿ ನಟರಾಜ ಹೆಗ್ಡೆ ಹಿರಿಯಡ್ಕ, ಪ್ರಾಂಶುಪಾಲ ಮಂಜುನಾಥ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್.ಶ್ರೀನಿವಾಸ ರಾವ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಮೃತಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ನಟರಾಜ್ ಹೆಗ್ಡೆ, ಪ್ರಾಂಶುಪಾಲರಾದ ಮಂಜುನಾಥ ಭಟ್, ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ಬಿ.ಎಲ್.ವಿಶ್ವಾಸ್, ಪ್ರಧಾನ ಕಾರ್ಯದರ್ಶಿ ನಾಗರಾಜೇಂದ್ರ ಎಂ.ಆರ್., ದೇವರಾಜ ಶಾಸ್ತ್ರಿ ಉಪಸ್ಥಿತರಿದ್ದರು.