ನಿಟ್ಟೆ: ಡಾ.ಶ್ರೀಶಿವರಾತ್ರಿ ರಾಜೇಂದ್ರ ಜಯಂತಿ ಆಚರಣೆ
ನಿಟ್ಟೆ, ಸೆ.2: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು, ಕಾರ್ಕಳ ತಾಲೂಕು ಶರಣ ಸಾಹಿತ್ಯ ಪರಿಷತ್ತು ಹಾಗು ಉಡುಪಿ ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ಶ್ರೀಜಗದ್ಗುರು ಡಾ. ಶಿವರಾತ್ರಿ ರಾಜೇಂದ್ರರ ಜಯಂತಿಯನ್ನು ಕಾರ್ಕಳದ ನಿಟ್ಟೆಯಲ್ಲಿರುವ ಜಿಲ್ಲಾ ಪಂಚಾಯತ್ ಸರಕಾರಿ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ಸಂದರ್ಭ ಶಾಲೆಯ ವಿದ್ಯಾರ್ಥಿಗಳಿಗೆ ವಚನಗಳಲ್ಲಿ ನಿಸರ್ಗದ ಪರಿಕಲ್ಪನೆ - ವಚನ ಸ್ಪರ್ಧೆ - ಗಾಯನ ಮತ್ತು ಅದರ ವಿಶ್ಲೇಷಣೆ ಕಾರ್ಯಕ್ರಮ ನಡೆಸಲಾಯಿತು. ಸುಮಾರು 20 ಮಂದಿ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎನ್‌ಇಟಿಯ ಕ್ಯಾಂಪಸ್ ಡೈರೆಕ್ಟರ್ ಯೋಗೀಶ್ ಹೆಗ್ಡೆ ಭಾಗವಹಿಸಿದ್ದು, ತಮ್ಮ ಭಾಷಣದಲ್ಲಿ ವಚನ ಗಳು ನಾವೆಲ್ಲರೂ ಸಮಾನತೆಯ ಮನೋಭಾವವನ್ನು ಅಳವಡಿಸಿಕೊಳ್ಳಲು, ಪ್ರಾಮಾಣಿಕತೆ, ಆಧ್ಯಾತ್ಮಿಕತೆ, ಮತ್ತು ಸತ್ಯವನ್ನೂ ಜೀವನದಲ್ಲಿ ಅನುಸರಿಸಲು ಮಾರ್ಗದರ್ಶನ ನೀಡುತ್ತವೆ ಎಂದರು.
ಮತೊಬ್ಬ ಅತಿಥಿ ಡಾ. ಶಂಕರ್ ಬಿ.ಬಿ. ಮಾತನಾಡಿ, ವಚನಗಳು ಮಾನವ ಕುಲಕ್ಕೆ ಸಮಾನತೆ, ಸತ್ಯ ಮತ್ತು ಶ್ರದ್ಧೆಯ ಮಾರ್ಗದರ್ಶನ ನೀಡುತ್ತವೆ ಎಂದರು.
ಶಾಲೆಯ ಮುಖ್ಯೋಪಾದ್ಯಾಯಿನಿ ಶೋಭಾ ಸ್ವಾಗತಿಸಿದರು. ಪ್ರಾಸ್ತಾವಿಕ ವಾಗಿ ಮಾತನಾಡಿದ ಕದಳಿ ಮಹಿಳಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷೆ ಡಾ.ವೀಣಾ ದೇವಿ ಶಾಸ್ತ್ರೀಮಠ, ಶ್ರೀಜಗದ್ಗುರು ಡಾ. ಶ್ರೀಶಿವರಾತ್ರಿ ರಾಜೇಂದ್ರ ಪೂಜ್ಯರ ಜಯಂತಿಯ ಮಹತ್ವವನ್ನು ವಿವರಿಸಿದರು.