ಜನರ ಕೆಲಸ ಮಾಡುವ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು: ಸಿಎಂ ಸಿದ್ದರಾಮಯ್ಯ
ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತರಾಟೆ
ಉಡುಪಿ: ಜನರ ಕೆಲಸ ಮಾಡುವ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು. ಪಕ್ಷ ರಾಜಕಾರಣ ಚುನಾವಣೆ ವೇಳೆ ಮಾತ್ರ. ಜನರ ಕೆಲಸದ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ, ಉದಾಸೀನ ತೋರಿಸಿದರೆ, ಜನರಿಗೆ ಸ್ಪಂದಿಸದಿದ್ದರೆ ಎಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ ಸಹಿಸಲು ಸಾಧ್ಯವಿಲ್ಲ. ಜನಸ್ಪಂದನೆಗೆ ಸಿದ್ದರಿಲ್ಲದವರು ಸ್ಥಾನ ತ್ಯಾಗ ಮಾಡಿ. ಜನಸ್ಪಂದನೆಗೆ ಸಾಕಷ್ಟು ಅಧಿಕಾರಿಗಳು ಇದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳ ನಿರ್ವಹಣೆಯ ಕುರಿತಂತೆ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿ ಉಡುಪಿ ಜಿಲ್ಲೆಗೆ ಆಗಮಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಾಕೃತಿಕ ವಿಕೋಪ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಜನಸಾಮಾನ್ಯರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದಾಗ ಮಾತ್ರ ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಅಧಿಕಾರಿಗಳು ಮುತುವರ್ಜಿ ವಹಿಸಿ ತಮ್ಮ ಕರ್ತವ್ಯ ನಿರ್ವಹಿಸಿದರೆ ಸರಕಾರದ ಕಾರ್ಯಕ್ರಮಗಳು ಸಮರ್ಪಕವಾಗಿ ಜನರಿಗೆ ತಲುಪುತ್ತದೆ ಎಂದವರು ಹೇಳಿದರು.
ಸಾರ್ವಜನಿಕರ ತೆರಿಗೆ ಹಣದಿಂದ ಸರಕಾರವನ್ನು ನಡೆಸಲಾಗುತ್ತದೆ. ಅವರ ಆಶಯಕ್ಕೆ ತಕ್ಕಂತೆ ಸೇವೆಗಳನ್ನು ಒದಿಸುವುದು ಜನಪ್ರತಿನಿಧಿಗಳಾದ ನಮ್ಮ ಹಾಗೂ ಅಧಿಕಾರಿಗಳ ಆದ್ಯ ಕರ್ತವ್ಯ. ಅದರಲ್ಲೂ ಜನರ ನೇರ ಸಂಪರ್ಕ ಹೊಂದಿ ಸರಕಾರ ಮತ್ತು ಜನರ ಮದ್ಯೆ ಸೇತುವೆಯಾಗಿ ಸರಕಾರಿ ನೌಕರರು ಕಾರ್ಯನಿರ್ವಹಿಸಬೇಕು. ಇದನ್ನು ಮರೆತರೆ ಆತ ಜನವಿರೋಧಿ ಎನಿಸಿಕೊಳ್ಳುತ್ತಾನೆ ಎಂದರು.
ಅಧಿಕಾರಿಗಳಿಗೆ ಸ್ಥಾನಮಾನ ಸಂಬಳ ಸವಲತ್ತುಗಳು ಸಿಗುವುದು ಜನರ ತೆರಿಗೆ ಹಣದಿಂದ. ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೆಲಸ ಮಾಡಬಾರದು. ಸ್ಥಳಕ್ಕೆ ಭೇಟಿ ನೀಡುವುದು ಕಡ್ಡಾಯ. ಜಿಲ್ಲಾ ರಕ್ಷಣಾಧಿಕಾರಿಗಳು ಠಾಣೆಗಳಿಗೆ ಭೇಟಿ ನೀಡಬೇಕು. ದೂರುಗಳು ಬಂದಾಗ ಮೊದಲು ಎಫ್‌ಐಆರ್ ದಾಖಲಿಸಿಕೊಳ್ಳಿ ಎಂದು ಮುಖ್ಯಮಂತ್ರಿಗಳು ನುಡಿದರು.
ಪೂರ್ಣ ಮನೆ ಬಿದ್ದರೆ 5 ಲಕ್ಷ: ಮಳೆಗಾಲದ ಸಂದರ್ಭದಲ್ಲಿ ಗಾಳಿಮಳೆಗೆ ವಾಸ್ತವ್ಯದ ಮನೆಗೆ ಸಂಪೂರ್ಣ ಹಾನಿ ಆಗಿದ್ದರೆ 5 ಲಕ್ಷ ರೂ ಪರಿಹಾರ ನೀಡಬೇಕು. ಇದು ಸರಕಾರದ ನಿರ್ಧಾರ. ಮನೆ ಸ್ವಂತ ಜಾಗದಲ್ಲಿ ಕಟ್ಟಿದ್ದಾರೋ- ಇಲ್ಲವೋ, ಹಕ್ಕು ಪತ್ರ ಇದೆಯೋ-ಇಲ್ಲವೋ ಎನ್ನುವುದನ್ನು ನೋಡದೆ ಮಳೆಯಿಂದ ಬಿದ್ದ ಮನೆಗೆ ಪರಿಹಾರ ನೀಡಿ. ಮೊದಲು ಮನೆ ಆಗಬೇಕು. ಮನೆ ಪೂರ್ಣಗೊಳ್ಳುವವರೆಗೆ ಅಧಿಕಾರಿಗಳೇ ಮೇಲುಸ್ತುವಾರಿ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಳೆ ಹಾನಿ ಸಮೀಕ್ಷೆ: ಮಳೆಯಿಂದ ಬೆಳೆ ಹಾನಿಗೆ ಸಂಬಂಧಪಟ್ಟಂತೆ ಸಂಪೂರ್ಣ ಸಮೀಕ್ಷೆ ನಡೆಸಿ, ಬೆಳೆ ಹಾನಿಗೊಳಗಾದವರಿಗೆ ತಪ್ಪದೆ ಪರಿಹಾರ ಸಿಗಬೇಕು. ಸ್ಥಳಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿ. ಬೆಳೆ ಹಾನಿ ಆದವರಿಗೆ ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಿಸಬೇಕು. ಒಮ್ಮೆ ಬೆಳೆ ಪರಿಹಾರ ಕೊಟ್ಟ ಬಳಿಕ ಪರ್ಯಾಯ ಬೆಳೆ ಬೆಳೆಯಲು ಅಗತ್ಯವಾದ ಬೀಜ, ಗೊಬ್ಬರ ಸೇರಿದಂತೆ ಎಲ್ಲಾ ಸವಲತ್ತುಗಳನ್ನು ಒದಗಿಸಿ. ಅಡಕೆ ಬೆಳೆಗೆ ಬಂದಿರುವ ಎಲೆಚುಕ್ಕೆ ರೋಗದ ಬಗ್ಗೆ ಕೃಷಿ ವಿಜ್ಞಾನಿಗಳ ನೆರವು ಪಡೆದು ಪರಿಹಾರ ಕಂಡುಕೊಳ್ಳಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯಿಂದ 63 ಕೋಟಿ ರೂ.ನಷ್ಟ: ಜಿಲ್ಲೆಯಲ್ಲಿ ಈ ಬಾರಿಯ ಮಳೆಯಿಂದ ಒಟ್ಟು ೬೨.೯೬ ಕೋಟಿ ರೂ.ನಷ್ಟು ಮೂಲಸೌಕರ್ಯಗಳನ್ನು ಕಲ್ಪಿಸುವ ರಸ್ತೆ, ವಿದ್ಯುತ್ ಸಂಪರ್ಕ ಸಾಧನಗಳು, ಸರಕಾರಿ ಕಟ್ಟಡಳಿಗೆ ಹಾನಿಯಾಗಿದೆ. ಈ ಬಗ್ಗೆ ಸರ್ವೆ ಮಾಡಿಸಿ ಸರಕಾರಕ್ಕೆ ಕೂಡಲೇ ವರದಿ ಕಳುಹಿಸಿ, ಅವುಗಳ ಪುನರ್ ನಿರ್ಮಾಣಕ್ಕೆ ಮುಂದಾಗಿ ಎಂದರು.
ಕಾಲು ಸಂಕ ನಿರ್ಮಾಣ: ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಸಮಸ್ಯೆ ಆಗಿರುವ ಕಾಲುಸಂಕದಿಂದ ಆಗಿರುವ ಅನಾಹುತಗಳನ್ನು ತಪ್ಪಿಸಲು ಸೇತುವೆ ಗಳನ್ನು ನಿರ್ಮಿಸಬೇಕು. ನರೇಗಾ ಮತ್ತು ಲೋಕೋಪಯೋಗಿ ಇಲಾಖೆಗಳು ಜಂಟಿಯಾಗಿ ೫ರಿಂದ ೧೦ ಲಕ್ಷ ರೂ. ವೆಚ್ಚದಲ್ಲಿ ಸೇತುವೆಗಳನ್ನು ನಿರ್ಮಿ ಸಲು ಯೋಜನೆ ಸಿದ್ಧಪಡಿಸಿ ಮತ್ತು ಎರಡು ವರ್ಷಗಳಲ್ಲಿ ಸೇತುವೆ ನಿರ್ಮಾಣ ಕೆಲಸಗಳು ಮುಗಿಯುವ ರೀತಿಯಲ್ಲಿ ಕೆಲಸ ಮಾಡಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಔಷಧಿಗಳ ವಿತರಣೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯಲ್ಲಿ ಅಡಿಕೆಗೆ ಚುಕ್ಕೆ ರೋಗ ಕಂಡು ಬಂದಿದೆ. ಇದಕ್ಕೆ ಕಾರಣವೇನು? ಇದನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಲು ಏನು ಕ್ರಮ ಅನುಸರಿಸಬೇಕು, ಎಂಬುದರ ಬಗ್ಗೆ ವಿಜ್ಞಾನಿಗಳ ಸ್ಥಳ ಭೇಟಿಗಳೊಂದಿಗೆ ವರದಿಯನ್ನು ಸರಕಾರಕ್ಕೆ ನೀಡಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಲ್ಲಾಧಿಕಾರಿಗಳು ಆಗಿಂದಾಗ್ಗೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆಗಳನ್ನು ಕೈಗೊಳ್ಳುವ ಜೊತೆಗೆ ಹಾಸ್ಟೆಲ್, ಆಸ್ಪತ್ರೆ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಉಡುಪಿ, ಮಂಗಳೂರು ಜಿಲ್ಲೆಗಳು ಅಕ್ಷರಸ್ಥ ಜಿಲ್ಲೆಯಾಗಿದ್ದು, ರಾಜ್ಯಕ್ಕೆ ಮಾದರಿಯಾಗಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕಂಡುಬರುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ತ್ರೈಮಾಸಿಕ ಜಿಲ್ಲಾ ಪ್ರಗತಿ ಪರಿಶೀಲನೆ ತೆಗೆದುಕೊಳ್ಳುವ ಜೊತೆಗೆ ಅಯ್ದ ಇಲಾಖೆಗಳ ಪರಿಶೀಲನೆಯನ್ನು ತಿಂಗಳಿಗೊಮ್ಮೆ ಕೈಗೊಳ್ಳಬೇಕು ಎಂದರು.
ಸಾರ್ವಜನಿಕ ಕುಂದುಕೊರತೆಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅಧಿಕಾರಿಗಳು ಕೂಡಲೇ ಸ್ಪಂದಿಸಬೇಕು. ಈ ಬಗ್ಗೆ ನಿರ್ಲಕ್ಷ್ಯವಹಿಸುವುದು ಸರಿಯಲ್ಲ ಎಂದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್, ಬಂದರು ಮತ್ತು ಮೀನುಗಾರಿಕಾ ಸಚಿವ ಮಾಂಕಾಳು ವೈದ್ಯ, ಶಾಸಕರಾದ ವಿ.ಸುನೀಲ್ ಕುಮಾರ್, ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ ಗಂಟಿಹೊಳೆ, ಕಿರಣ್ ಕೊಡ್ಗಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಜುನಾಥ ಭಂಡಾರಿ, ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ರಜನೀಶ್ ಗೋಯಲ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎಂ.ಟಿ.ರೇಜು, ಉಡುಪಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.