ಅ.4ರಿಂದ ಉಡುಪಿ ಜಿಲ್ಲೆಯ 155 ಗ್ರಾಪಂಗಳಲ್ಲಿ ಯಾವುದೇ ಸೇವೆ ಲಭ್ಯವಿಲ್ಲ: ಮಂಜುನಾಥ ಶೆಟ್ಟಿ
ಉಡುಪಿ, ಅ.2: ಜಿಲ್ಲೆಯ 155 ಗ್ರಾಮ ಪಂಚಾಯತ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪಿಡಿಓ ಸೇರಿದಂತೆ ಸಮಸ್ತ ನೌಕರರು ರಾಜ್ಯ ಮಟ್ಟದ ಮುಷ್ಕರದಲ್ಲಿ ಪಾಲ್ಗೊಳ್ಳಲಿರುವುದರಿಂದ ಅ.4ರಿಂದ ಜಿಲ್ಲೆಯ ಯಾವುದೇ ಗ್ರಾಪಂನಲ್ಲಿ ಅನಿರ್ಧಿಷ್ಟಾವಧಿ ಯವರಿಗೆ ಯಾವುದೇ ಸೇವೆ ಲಭ್ಯವಿರುವುದಿಲ್ಲ ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ಹಾಗೂ ರಾಜ್ಯ ವಿಭಾಗೀಯ ಅಧ್ಯಕ್ಷ ಮಂಜುನಾಥ ಪಿ.ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಥಳೀಯ ಸಂಸ್ಥೆಯಾದ ಗ್ರಾಪಂಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಹಾಗೂ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಸ್ತ ನೌಕರರು ಅ.4ರಿಂದ ಸರಕಾರ ಹಾಗೂ ಇಲಾಖೆಯ ಧೋರಣೆಯನ್ನು ಖಂಡಿಸಿ ಮತ್ತು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಧರಣಿ ಮುಷ್ಕರದಲ್ಲಿ ಪಾಲ್ಗೊಳ್ಳಲಿರುವುದರಿಂದ ಗ್ರಾಪಂಗಳಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ ಎಂದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ನೇತೃತ್ವದಲ್ಲಿ 11 ವೃಂದ ಸಂಘಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಮುಷ್ಕರವನ್ನು ಆಯೋಜಿಸಲಿದ್ದು, ಇಡೀ ರಾಜ್ಯದ ಎಲ್ಲಾ ಗ್ರಾಪಂ ಸೇವೆಗಳನ್ನು ನಿಲ್ಲಿಸಿ ಅನಿರ್ಧಿಷ್ಟಾವಧಿ ಹೋರಾಟವನ್ನು ನಡೆಸಲಿವೆ ಎಂದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಸಿದ್ಧೇಶ್, ಶಿವರಾಜ್ ಎಂ, ಪ್ರಶಾಂತ್ ಕೆ., ರಮೇಶ್ ಕೆ.ನಾಯಕ್, ಸಂತೋಷ ಜೋಗಿ ಮುಂತಾದವರು ಉಪಸ್ಥಿತರಿದ್ದರು.