ಕಾರವಾರ - ಬೆಂಗಳೂರು ಮಧ್ಯೆ ವನ್‌ವೇ ವಿಶೇಷ ರೈಲು
ಉಡುಪಿ, ಅ.29: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಕಾರವಾರ ಹಾಗೂ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವನ್‌ವೇ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ನ.3ರಂದು ಓಡಿಸಲಾಗುವುದು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ರೈಲು ನಂ.01686 ಕಾರವಾರ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವನ್‌ವೇ ವಿಶೇಷ ರೈಲು ನ.3ರಂದು ಅಪರಾಹ್ನ 12 ಗಂಟೆಗೆ ಕಾರವಾರದಿಂದ ಹೊರಟು ಮರುದಿನ ಮುಂಜಾನೆ 4ಗಂಟೆಗೆ ಬೆಂಗಳೂರು ನಿಲ್ದಾಣ ವನ್ನು ಮುಟ್ಟಲಿದೆ. ರೈಲಿಗೆ ಅಂಕೋಲ, ಗೋರ್ಕಣ ರೋಡ್, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್, ಬಂಟ್ವಾಳ, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚೆನ್ನರಾಯಪಟ್ಟಣ, ಕುಣಿಗಲ್ ಹಾಗೂ ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲು ಒಟ್ಟು 20 ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಓಡಲಿದೆ. ಇವುಗಳಲ್ಲಿ 2ಟಯರ್ ಎಸಿ-1, 3ಟಯರ್ ಎಸಿ-3, 3ಟಯರ್ ಎಸಿ ಇಕಾನಮಿ-2, ಸ್ಲೀಪರ್ ಕೋಚ್-8, ಜನರಲ್-4, ಎಸ್‌ಎಲ್‌ಆರ್-1, ಜನರೇಟರ್ ಕಾರ್-1 ಕೋಚ್‌ಗಳಿವೆ.
ಬೆಂಗಳೂರು-ಮಡಗಾಂವ್: ಮರು ಪ್ರಯಾಣದಲ್ಲಿ ರೈಲು ನಂ.01685 ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್- ಮಡಗಾಂವ್ ಜಂಕ್ಷನ್ ನಡುವೆ ವನ್‌ವೇ ವಿಶೇಷ ರೈಲಾಗಿ ಸಂಚರಿಸಲಿದೆ. ನ. 4ರಂದು ಮುಂಜಾನೆ 6ಗಂಟೆಗೆ ಬೆಂಗಳೂರಿನಿಂದ ಹೊರಟು ಅದೇ ದಿನ ಸಂಜೆ 7:35ಕ್ಕೆ ಮಡಗಾಂವ್ ಜಂಕ್ಷನ್ ತಲುಪಲಿದೆ.
ಈ ರೈಲಿಗೆ ಚಿಕ್ಕಬಾಣಾವರ, ತುಮಕೂರು, ಅರಸಿಕೆರೆ ಜಂಕ್ಷನ್, ಬಿರೂರು ಜಂಕ್ಷನ್, ದಾವಣಗೆರೆ, ರಾಣಿಬೆನ್ನೂರು, ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಲೊಂಡಾ ಜಂಕ್ಷನ್, ಕ್ಯಾಸಲ್‌ರಾಕ್, ಕುಲೀಮ್, ಕುಡಚೆಡಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ಈ ವಿಶೇಷ ರೈಲೂ 20 ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ ಸಂಚರಿಸಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.