ಗ್ರಾ.ಪಂ. ಮೂಲಕ ಆನ್‌ಲೈನ್ ತರಬೇತಿ: ಮೊಬೈಲ್ ಆ್ಯಪ್‌ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ
ಉಡುಪಿ, ಸೆ.25: ಉಡುಪಿ ಜಿಲ್ಲೆಯ ಯುವಕ-ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಮೂಲಕ ಆನ್‌ಲೈನ್ ತರಬೇತಿ ನೀಡುವ ಮೊಬೈಲ್ ಆ್ಯಪ್‌ಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಇಂದು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕ್ರಿಯಾತ್ಮಕವಾದ ಈ ಕಾರ್ಯಕ್ರಮವು ಇಡೀ ರಾಜ್ಯದಲ್ಲೇ ಪ್ರಥಮ ಪ್ರಯತ್ನವಾಗಿದೆ. ಯುಪಿಎಸ್‌ಸಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಆಸಕ್ತಿ ಹೊಂದಿರುವ ಮಕ್ಕಳಿಗೆ ಗ್ರಾಮ ಮಟ್ಟದಲ್ಲಿಯೇ ಆನ್‌ಲೈನ್ ಮೂಲಕ ಪ್ರೊಬೆಷನರಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿ ಗಳು ಹಾಗೂ ತಜ್ಞರ ಮೂಲಕ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.
ಬುದ್ಧಿವಂತ ಜಿಲ್ಲೆ ಎನಿಸಿರುವ ಉಡುಪಿಯಲ್ಲಿ ಬಹುತೇಕ ಯುವ ಜನತೆ ವ್ಯವಹಾರದ ಕಡೆ ಗಮನ ತೋರಿಸುತ್ತಿದ್ದಾರೆ. ಮುಂದೆ ಈ ಕಾರ್ಯಕ್ರಮದ ಮೂಲಕ ಈ ಜಿಲ್ಲೆಯಿಂದ ಸಾಕಷ್ಟು ಮಂದಿ ಐಎಎಸ್, ಐಪಿಎಸ್ ಅಧಿಕಾರಿ ಗಳು ನೇಮಕ ಆಗಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದ ಅವರು, ಜಿಲ್ಲಾ ಪಂಚಾಯತ್ ಸ್ಟುಡಿಯೋದಿಂದ ಪ್ರತಿದಿನ ಸಂಜೆ 5.30ರಿಂದ 7 ಗಂಟೆಯವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಲಾಗುತ್ತದೆ. ಜಿಲ್ಲೆಯ 155 ಗ್ರಾಮ ಪಂಚಾಯತಿಗಳಲ್ಲಿ ಏಕಕಾಲದಲ್ಲಿ ಈ ತರಬೇತಿ ನಡೆಯಲಿದೆ ಎಂದರು.
ಆಸಕ್ತ ವಿದ್ಯಾರ್ಥಿಗಳು ಮೊಬೈಲ್ ಆ್ಯಪ್ ಮೂಲಕ ನೊಂದಾವಣೆ ಮಾಡಿ ಕೊಳ್ಳಬೇಕು. ಗ್ರಾಮೀಣ ಪ್ರದೇಶದ ಬಡವರ ಮಕ್ಕಳಿಗೆ ದೂರದ ದೆಹಲಿ, ಹೈದರಾಬಾದ್‌ಗೆ ತೆರಳಿ ಇಂತಹ ತರಬೇತಿ ಪಡೆಯಲು ಸಾಧ್ಯವಾಗುವುದಿಲ್ಲ. ಅವರಿಗೆ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಸರಕಾರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದಕ್ಕೆ ಪ್ರತಿ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಯೋಜನಾಧಿಕಾರಿ ಶ್ರೀನಿವಾಸ ರಾವ್ ಮೊದಲಾದವರು ಉಪಸ್ಥಿತರಿದ್ದರು.