‘ಅಸಂಘಟಿತ ಆಹಾರಸಂಸ್ಕರಣಾ ಉದ್ಯಮಗಳ ನಿಯಮಬದ್ದಕ್ಕೆ ಅವಕಾಶ’
ಪಿಎಂಎಫ್‌ಎಂಇ ಯೋಜನೆ ಜಿಲ್ಲಾ ಮಟ್ಟದ ಸಮಿತಿ ಸಭೆ
ಉಡುಪಿ, ಆ.3: ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದರಲ್ಲಿ ಅಸಂಘಟಿತ ಆಹಾರ ಸಂಸ್ಕರಣಾ ಉದ್ಯಮಗಳ ನಿಯಮ ಬದ್ಧಗೊಳಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೃಷಿ ಇಲಾಖೆಯ (ಆಹಾರ, ಸಂಸ್ಕರಣೆ ಹಾಗೂ ಕಟಾವು ತಂತ್ರಜ್ಞಾನ) ವಿಶೇಷ ಕಾರ್ಯದರ್ಶಿ ಡಾ.ಆರ್. ಮನೋಜ್ ಹೇಳಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅಧ್ಯಕ್ಷತೆಯಲ್ಲಿ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಧಾನ ಮಂತ್ರಿಗಳ ಕಿರು ಅಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯ ಕುರಿತು ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಅವರು ಮಾತನಾಡುತಿದ್ದರು.
ಸಣ್ಣ ಉದ್ಯಮಗಳು, ವೈಯಕ್ತಿಕ ಉದ್ದಿಮೆಗಳಿಗೆ, ಮಾಲಕತ್ವದ ಸಂಸ್ಥೆಗಳಿಗೆ, ಪಾಲುದಾರಿಕೆ ಸಂಸ್ಥೆಗಳಿಗೆ, ಖಾಸಗಿ ಸಂಸ್ಥೆ ಗಳಿಗೆ, ರೈತ ಉತ್ಪಾದಕ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಸಹಕಾರಿ ಸಂಘಗಳಿಗೆ ಸಾಲ ಸಂಪರ್ಕಿತ ಶೇ.35ರಷ್ಟು ಕೇಂದ್ರ ಸರ್ಕಾರದ ಸಹಾಯಧನ ಜೊತೆಗೆ ರಾಜ್ಯಸರಕಾರದಿಂದ ಹೆಚ್ಚುವರಿ ಶೇ.15 ಸಹಾಯ ಧನ, ಗರಿಷ್ಟ 15ಲಕ್ಷ ರೂ. ಅಥವಾ ಶೇ.50 (ಯಾವುದು ಕಡಿಮೆಯೋ ಅದನ್ನು) ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಪ್ರಸ್ತುತ ಯೋಜನೆಯ ಮಾರ್ಗಸೂಚಿಯನ್ನು ಸರಳೀಕರಣ ಮಾಡಲಾಗಿದ್ದು, ಎಲ್ಲಾ ಉತ್ಪನ್ನಗಳಲ್ಲಿಯೂ ಹೊಸ ಮತ್ತು ಹಳೆ ಘಟಕಗಳ ಉನ್ನತೀಕರಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಯೋಜನೆಗೆ ಸಾಕಷ್ಟು ಅವಕಾಶಗಳಿದ್ದು, ತೆಂಗಿನ ಎಣ್ಣೆ ತಯಾರಿಕೆ, ಒಣಮೀನು ತಯಾರಿಕೆ, ಬೇಕರಿ ಉತ್ಪನ್ನಗಳು, ಹಪ್ಪಳ ತಯಾರಿಕೆ, ಸಾಗರೋತ್ಪನ್ನ ಉತ್ಪನ್ನಗಳು, ಮಸಾಲ ಪದಾರ್ಥಗಳು, ಹಾಲಿನ ಉತ್ಪನ್ನಗಳು, ತೆಂಗಿನ ಸಂಸ್ಕರಣಾ ಘಟಕ, ಬೇಕರಿ ಉತ್ಪನ್ನಗಳಿಗೆ ವಿಫುಲವಾದ ಅವಕಾಶವಿದ್ದು, ರೈತರು ಮತ್ತು ಉದ್ದಿಮೆದಾರರು ಈ ಯೋಜನೆಯ ನೆರವನ್ನು ಪಡೆದು ಸ್ವ-ಉದ್ಯಮವನ್ನು ಸ್ಥಾಪಿಸಬಹುದಾಗಿದೆ ಎಂದರು.
ಈ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 225 ಘಟಕಗಳ ಸ್ಥಾಪನೆಗೆ ಗುರಿ ನೀಡಲಾಗಿದ್ದು, ಆಸಕ್ತ ಉದ್ದಿಮೆದಾರರು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸೂರಜ್ ಶೆಟ್ಟಿ (ಮೊ: 9019075051) ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ಡಾ.ಮನೋಜ್ ವಿವರಿಸಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ. ಹೆಚ್ ಬಂಥನಾಳ, ಜಂಟಿ ಕೃಷಿ ನಿರ್ದೇಶಕಿ ಸೀತಾ ಎಂ.ಸಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಸಿಹಿದ್ದರು.
ಸಭೆಯ ಬಳಿಕ ಡಾ.ಮನೋಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಿಎಂಎಫ್‌ಎಂಇ ಯೋಜನೆಯಡಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ವಿವಿಧ ಘಟಕಗಳಿಗೆ ಭೇಟಿ ನೀಡಿದರು.