ಕರಾವಳಿ ಜಿಲ್ಲೆಗಳಿಗೆ ಮುಂದಿನ 5 ದಿನ ‘ಆರೆಂಜ್ ಅಲರ್ಟ್’
ಉಡುಪಿ, ಆ.26: ರಾಜ್ಯ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳ ಕಾಲ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ ಎಂದು ಬೆಂಗಳೂರಿನ ಹವಾಮಾನ ಕೇಂದ್ರ ತಿಳಿಸಿದೆ.
ಈ ಅವಧಿಯಲ್ಲಿ ರಾಜ್ಯದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಬಹುಭಾಗದಲ್ಲಿ ಗಂಟೆಗೆ 30ರಿಂದ 40 ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಕರಾವಳಿಯಲ್ಲಿ ಆ.27ರಿಂದ 31ರವರೆಗೆ ರೆಡ್ ಅಲರ್ಟ್ ಇದ್ದು, ಅವಧಿಯಲ್ಲಿ 115.6ಮಿಮೀ.ಗಿಂತ ಅಧಿಕ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರದ ಮುನ್ಸೂಚನೆಯಲ್ಲಿ ತಿಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆ ಸುರಿಯುತ್ತಿದೆ. ನಿನ್ನೆ ಸಂಜೆ ವಂಡ್ಸೆ ಹೋಬಳಿಯ ಕೆಂಚನೂರು ಗ್ರಾಮದಲ್ಲಿ ಮೇಯಲು ಬಿಟ್ಟಿದ್ದ ದನವನ್ನು ಮನೆಗೆ ಕರೆತರುತಿದ್ದ ಸುಜಾತ ಆಚಾರ್ತಿ ಎಂಬ ಮಹಿಳೆಯ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಜೊತೆಯಲ್ಲಿದ್ದ ದನವೂ ಮೃತಪಟ್ಟಿತ್ತು.
ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 23.2ಮಿ.ಮೀ. ಮಳೆಯಾ ಗಿದೆ. ಬೈಂದೂರಿನಲ್ಲಿ ಅತ್ಯಧಿಕ 60.6ಮಿಮೀ.ಮಳೆ ಸುರಿದರೆ ಕುಂದಾಪುರದಲ್ಲಿ 29.4ಮಿ.ಮೀ. ಮಳೆಯಾಗಿದೆ. ಉಳಿದಂತೆ ಕಾರ್ಕಳದಲ್ಲಿ 13.9, ಹೆಬ್ರಿಯಲ್ಲಿ 12.9, ಉಡುಪಿಯಲ್ಲಿ 9.6, ಕಾಪುವಿನಲ್ಲಿ 4.0 ಹಾಗೂ ಬ್ರಹ್ಮಾವರದಲ್ಲಿ 3.8 ಮಿ.ಮೀ. ಮಳೆಯಾಗಿದೆ.