ಎಸ್ಕಾಂನ ಹೊರಗುತ್ತಿಗೆ ನೌಕರರಿಂದ ಆ.10ರಿಂದ ಮುಷ್ಕರ
ಉಡುಪಿ, ಜು.27: ರಾಜ್ಯದ ಕೆಪಿಸಿಟಿಸಿಎಲ್ ಹಾಗೂ ಎಸ್ಕಾಂಗಳಲ್ಲಿ ಕಳೆದ ಕೆಲವು ದಶಕಗಳಿಂದ ಹೊರಗುತ್ತಿಗೆ ನೌಕರರಾಗಿ, ಎಲ್ಲಾ ರೀತಿಯ ಸೌಲಭ್ಯ ಗಳಿಂದ ವಂಚಿತರಾಗಿ ದುಡಿಯುತ್ತಿರುವ 35,000ಕ್ಕೂ ಅಧಿಕ ಮಂದಿ ನೌಕರರು ತಮ್ಮ ಬಹುದಿನಗಳ ಬೇಡಿಕೆಯ ಈಡೇರಿಕೆಗೆ ಒತ್ತಾಯಿಸಿ ಆ.10 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಕೆಪಿಟಿಸಿಎಲ್ ಗುತ್ತಿಗೆ ನೌಕರರ ಹಿತರಕ್ಷಣಾ ವೇದಿಕೆಯ ರಾಝ್ಯಾಧ್ಯಕ್ಷ ಲೀಲಾಸಾಗರ್ ಎಂ.ಎಸ್. ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸ್ಟೇಶನ್ ಆಪರೇಟರ್ಸ್, ಸ್ಟೇಶನ್ ಸಹಾಯಕರು, ಗ್ಯಾಂಗ್‌ಮನ್‌ಗಳು ಹಾಗೂ ಮೀಟರ್ ರೀಡರ್ಸ್ ಇದರಲ್ಲಿ ಬರುತ್ತಾರೆ. ಇವರೆಲ್ಲರೂ ಕಳೆದ ಎರಡು ದಶಕಗಳಿಂದ ಹೊರಗುತ್ತಿಗೆ ನೌಕರರಾಗಿ ದುಡಿಯುತಿದ್ದಾರೆ. ಇವರಿಗೆ ಯಾವುದೇ ಸರಕಾರಿ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ದೂರಿದರು.
ಬೇಡಿಕೆಗಳು: ಕಳೆದ ಕೆಲವು ವರ್ಷಗಳ ತಮ್ಮ ಪ್ರಮುಖ ಬೇಡಿಕೆಯಾದ ಎಸ್ಕಾಂ ಹಾಗೂ ಕೆಪಿಟಿಸಿಎಲ್‌ಗಳಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿ ರುವ ಎಲ್ಲರನ್ನೂ ಖಾಯಂಗೊಳಿಸಬೇಕು. ಕ್ಷುಲ್ಲಕ ಕಾರಣಕ್ಕೆ ಕೆಲಸದಿಂದ ತೆಗೆದ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಅಪಘಾತದಿಂದ ನೌಕರರು ಮರಣವನ್ನಪ್ಪಿದಾಗ ಸರಕಾರದಿಂದ 25 ಲಕ್ಷ ರೂ. ಪರಿಹಾರ ನೀಡಬೇಕು. ಕೆಲವೊಂದು ಗುತ್ತಿಗೆದಾರರು ನೌಕರರಿಂದ ಪ್ರತಿತಿಂಗಳು ನಿರಂತರವಾಗಿ ಹಪ್ತಾ ವಸೂಲಿ ಮಾಡುತಿದ್ದು, ಇದಕ್ಕೆ ತಡೆ ಹಾಕಬೇಕು.
ತಮ್ಮ ಬೇಡಿಕೆಗಳ ಕುರಿತು ಈಗಾಗಲೇ ಸರಕಾರಕ್ಕೆ ಲಿಖಿತ ರೂಪದಲ್ಲಿ ನೀಡಿದ್ದು, ಬೇಡಿಕೆ ಈಡೇರಿಕೆಗೆ ಜು.31ರ ಗಡುವು ನೀಡಲಾಗಿದೆ. ಸರಕಾರ ಇವುಗಳಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸದಿದ್ದಲ್ಲಿ ಆ.10ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆ ನೀಡಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿನ ಹೊರಗುತ್ತಿಗೆ ನೌಕರರ ಸಭೆಯನ್ನು ಕರೆದು ಅವರಿಗೆ ಎಲ್ಲಾ ಮಾಹಿತಿ ನೀಡಲಾಗುತ್ತಿದೆ. ಇಂದು ಉಡುಪಿ ಜಿಲ್ಲಾ ಸಮಿತಿಯೊಂದಿಗೆ ಸಭೆ ನಡೆದಿದೆ. ಉಡುಪಿಯಲ್ಲಿ 750 ಮಂದಿ ಹೊರಗುತ್ತಿಗೆ ನೌಕರರಿದ್ದಾರೆ ಎಂದು ಲೀಲಾಸಾಗರ್ ತಿಳಿಸಿದರು.
ಬೇಡಿಕೆ ಈಡೇರದಿದ್ದರೆ ಈ ಬಾರಿಯ ನಾವು ಮುಷ್ಕರ ನಡೆಸುವುದು ಖಂಡಿತ. ಮೂರು ಸಾವಿರಕ್ಕೂ ಅಧಿಕ ಮಂದಿ ಮುಷ್ಕರ ಪ್ರಾರಂಭಿಸಲಿದ್ದಾರೆ. ಆಗಲೂ ಸರಕಾರ ಮಣಿಯದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಲೀಲಾಸಾಗರ್ ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಪರಶುರಾಮ್ ರಾಠೋಡ್, ರಾಜ್ಯ ಸಂಘಟನಾ ಕಾರ್ಯದರ್ಶಿ ನಾಗಪ್ಪ ಬಾವಿನಕಟ್ಟೆ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಮನೋಹರ, ಉಡುಪಿ ಜಿಲ್ಲಾ ಕಾರ್ಯದರ್ಶಿ ಅನಿಲ್ ದೇವಾಡಿಗ ಉಪಸ್ಥಿತರಿದ್ದರು.