ಪರ್ಕಳ: ನೂತನ ದಾರಿದೀಪಗಳ ಉದ್ಘಾಟನೆ
ಉಡುಪಿ, ಸೆ.5: ಉಡುಪಿ ನಗರಸಭಾ ವ್ಯಾಪ್ತಿಯ ಮಣಿಪಾಲ- ಪರ್ಕಳ ಮುಖ್ಯರಸ್ತೆಯಲ್ಲಿ ನೂತನವಾಗಿ ಅಳವಡಿಸಲಾದ ಬೀದಿ ದೀಪಗಳ ಉದ್ಘಾಟನೆಯನ್ನು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಇಂದು ಸಂಜೆ ನೆರವೇರಿಸಿದರು.
ಈ ಸಂದರ್ಭ ಮಾತನಾಡಿದ ಯಶ್ ಪಾಲ್ ಸುವರ್ಣ, ಗೌರಿ ಗಣೇಶ ಹಬ್ಬದ ಶುಭ ಸಂದರ್ಭ ಬೀದಿ ದೀಪದ ಉದ್ಘಾಟನೆಯ ಮೂಲಕ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಉಡುಪಿ ಕರಾವಳಿ ಬೈಪಾಸಿನಿಂದ ಪರ್ಕಳ ಗಡಿಭಾಗದವರೆಗೆ ದಾರಿ ದೀಪ ವ್ಯವಸ್ಥೆ ಪೂರ್ಣಗೊಂಡಿದ್ದು ಸುಗಮ ಸಂಚಾರಕ್ಕೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಸುಮಾರು 1 ಕೋಟಿ ವೆಚ್ಚದಲ್ಲಿ ಮಣಿಪಾಲ ಎಂಐಟಿ ಬಳಿಯಿಂದ ಪರ್ಕಳ ನಗರಸಭೆಯ ಗಡಿಭಾಗದವರೆಗೆ 117 ಬೀದಿ ದೀಪಗಳನ್ನು ಉಡುಪಿ ನಗರಸಭೆ ಮತ್ತು ಭಾರಧ್ವಜ್ ಎಂಟರ್ಪ್ರೈಸಸ್ ಸಹಭಾಗಿತ್ವದಲ್ಲಿ ಅಳವಡಿಸಲಾಗಿದೆ.
ಈ ಸಂದರ್ಭ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭಾ ಸದಸ್ಯರಾದ ಸುಮಿತ್ರಾ ನಾಯಕ್, ಅಶ್ವಿನಿ ಅರುಣ್, ವಿಜಯಲಕ್ಷ್ಮೀ, ಮಂಜುನಾಥ ಮಣಿಪಾಲ, ಬಾಲಕೃಷ್ಣ ಶೆಟ್ಟಿ, ಟಿ. ಜಿ. ಹೆಗ್ಡೆ, ಹರೀಶ್ ಶೆಟ್ಟಿ, ಗಿರಿಧರ ಆಚಾರ್ಯ, ಗಿರೀಶ್ ಅಂಚನ್, ಯೋಗೀಶ್ ಸಾಲ್ಯಾನ್, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಸ್ಥಳೀಯ ಮುಖಂಡರಾದ ದಿಲೀಪ್ ಹೆಗ್ಡೆ, ಹೇಮಂತ ಕುಮಾರ್ ಯು., ಅಕ್ಷಿತ್ ಶೆಟ್ಟಿ ಹೆರ್ಗ ಮೊದಲಾದವರು ಉಪಸ್ಥಿತರಿದ್ದರು.