ಸಾಹಿತ್ಯಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪಡೆದ ‘ರಾಜಕಾರಣಿ’ ಡಾ.ಎಂ.ವೀರಪ್ಪ ಮೊಯ್ಲಿ
ಡಾ.ಎಂ.ವೀರಪ್ಪ ಮೊಯ್ಲಿ
ಉಡುಪಿ, ಅ.30: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಮರೆಯಲಾಗದ ರಾಜಕಾರಣಿಯೂ ಹೌದು ಮತ್ತು ಲೇಖಕ- ಸಾಹಿತಿಯೂ ಹೌದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಸಾಹಿತಿ ಡಾ.ಪುರುಷೋತ್ತಮ ಬಿಳಿಮಲೆ ಹಿಂದೊಮ್ಮೆ ಬಣ್ಣಿಸಿರುವುದಕ್ಕೆ ರಾಜ್ಯ ಸರಕಾರ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಈ ಬಾರಿಯ ಪ್ರತಿಷ್ಠಿತ ‘ರಾಜ್ಯೋತ್ಸವ’ ಪ್ರಶಸ್ತಿಯನ್ನು ಮೊಯ್ಲಿ ಅವರಿಗೆ ನೀಡುವ ಮೂಲಕ ಅಧಿಕೃತ ಮುದ್ರೆ ಒತ್ತಿದೆ.
ಈ ಬಾರಿ 69 ಮಂದಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗುವ ಸಾಧ್ಯತೆ ಇರುವವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ರಾಜಕಾರಣಿಯಾ ಗಿರುವ ಡಾ.ಎಂ.ವೀರಪ್ಪ ಮೊಯ್ಲಿ. ರಾಜಕಾರಣಿಯಾಗಿ ಸಮಸ್ತ ಕನ್ನಡಿಗರ ಮಾನ್ಯತೆ ಪಡೆದಿರುವ ವೀರಪ್ಪ ಮೊಯ್ಲಿ ಅವರಿಗೆ ಈ ಬಾರಿಯ ಪ್ರಶಸ್ತಿ ದಕ್ಕಿರುವುದು ಸಾಹಿತ್ಯ ಕ್ಷೇತ್ರಕ್ಕೆ. ‘ಸಾಹಿತಿ’ ವೀರಪ್ಪ ಮೊಯ್ಲಿ ಅವರು ಒಂದು ವರ್ಗಕ್ಕೆ ಒಪ್ಪಿತವಾಗಿದ್ದರೂ, ಸಂದೇಹದಿಂದ ನೋಡುವ ಮತ್ತೊಂದು ವರ್ಗವೂ ಸಾಹಿತ್ಯ ಕ್ಷೇತ್ರದಲ್ಲಿರುವುದು ಜನಜನಿತ.
ಹೀಗಾಗಿ ‘ಸಾಹಿತಿ’ ವೀರಪ್ಪ ಮೊಯ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಂತೂ ಬಹುಕಾಲ ಸರಿ-ತಪ್ಪು ಗಳ ಚರ್ಚೆಗೆ ಕಾರಣವಾಗುವುದು ಖಂಡಿತ.
ರಾಜಕೀಯದಲ್ಲಿ ಸಕ್ರಿಯರಾಗಿದ್ದಾಗಲೇ ಸಾಹಿತ್ಯದಲ್ಲೂ ಆಸಕ್ತಿಯನ್ನು ಹೊಂದಿರುವವರು ಅತಿ ವಿರಳ. ಅಂತವರಲ್ಲಿ ವೀರಪ್ಪ ಮೊಯ್ಲಿ ಅವರೂ ಒಬ್ಬರು. ಈಗಾಗಲೇ ನಾಡಿನ ಗಮನ ಸೆಳೆಯುವಷ್ಟು ಕಾದಂಬರಿ, ನಾಟಕ, ಕವನ ಸಂಕಲನ ಗಳನ್ನು ಬರೆದು ಪ್ರಕಟಿಸಿರುವ ಮೊಯ್ಲಿ ಅವರ ‘ಶ್ರೀರಾಮಾಯಣ ಅನ್ವೇಷಣಂ’, ‘ವಿಶ್ವಸಂಸ್ಕೃತಿಯ ಮಹಾಯಾನ’, ‘ಮತ್ತೆ ನಡೆಯಲಿ ಸಮರ’ ಕೃತಿಗಳು ಕನ್ನಡ ಸಾಹಿತ್ಯ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿವೆ.
ಸುಳಿಗಾಳಿ, ಸಾಗರದೀಪ, ಕೊಟ್ಟ, ತಂಬರೆ ಇವರ ಪ್ರಮುಖ ಕಾದಂಬರಿಗಳಾದರೆ, ಮಿಲನ, ಪ್ರೇಮವೆಂದರೆ, ಪರಾಜಿತ, ಮೂರು ನಾಟಕಗಳು ಇವರು ಬರೆದ ನಾಟಕಗಳು. ಪತ್ನಿ ಮಾಲತಿ ಮೊಯ್ಲಿ ಜೊತೆ ಸೇರಿ ಬರೆದ ಜೊತೆಯಾಗಿ ನಡೆ ಯೋಣ, ಹಾಲುಜೇನು, ಮತ್ತೆ ನಡೆಯಲಿ ಸಮ, ಯಕ್ಷಪ್ರಶ್ನೆ ಇವರ ಕಾವ್ಯ-ಕವನ ಸಂಕಲನಗಳು.
ಪ್ರಶಸ್ತಿ-ಪುರಸ್ಕಾರ: ವೀರಪ್ಪ ಮೊಯ್ಲಿ ಅವರು ಮಹಾಕಾವ್ಯ ಶ್ರೀರಾಮಾಯಣ ಅನ್ವೇಷಣಂಗೆ ಪ್ರತಿಷ್ಟಿತ ಮೂರ್ತಿದೇವಿ ಪ್ರಶಸ್ತಿ ದೊರೆತಿದ್ದರೆ, ಶ್ರೀಬಾಹುಬಲಿ ಅಹಿಂಸಾ ದಿಗ್ವಿಜಯಂ ಕೃತಿ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ.
ಮೊಯ್ಲಿ ಅವರು 2000ನೇ ಸಾಲಿನಲ್ಲಿ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ, 2001ನೇ ಸಾಲಿನಲ್ಲಿ ದೇವರಾಜ ಅರಸು ಪ್ರಶಸ್ತಿ, ಆರ್ಯಭಟ ಪುರಸ್ಕಾರ, 2002ರಲ್ಲಿ ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಉರಸ್ಕಾರ, ಏಷಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಗ್ಲೋಬಲ್ ಸಿಟಿಝನ್ ಪ್ರಶಸ್ತಿ, ಬ್ರಿಟನ್ನ ಸೌಸ್ ಆಫ್ ಕಾಮನ್ಸ್ ನೀಡುವ ಪ್ರಶಸ್ತಿ, ಮಂಗಳೂರು ವಿವಿಯ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಸಂದಿವೆ.
ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ 2010ನೇ ಸಾಲಿನ ಮೂರ್ತಿ ದೇವಿ ಪ್ರಶಸ್ತಿಯೊಂದಿಗೆ 2014ನೇ ಸಾಲಿನಲ್ಲಿ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗಳೂ ಇವರ ಮುಡಿಗೇರಿವೆ. ಸ್ವತ ಕವಿ ಹಾಗೂ ಸಾಹಿತಿಯೂ ಆಗಿರುವ ಮೊಯ್ಲಿ ನುರಿತ ರಾಜಕಾರಣಿ, ಸಮರ್ಥ ಆಡಳಿತಗಾರನಾಗಿರುವಂತೆ ಕವಿ ಹೃದಯವನ್ನೂ ಹೊಂದಿದ್ದಾರೆ.
ಡಾ.ಎಂ.ವೀರಪ್ಪ ಮೊಯ್ಲಿ ಪರಿಚಯ
ರಾಜ್ಯದ 13ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಎಂ.ವೀರಪ್ಪ ಮೊಯ್ಲಿ ಅವರು ರಾಜಾರಣದಲ್ಲಿ ಐದು ದಶಕಗಳಿಗೂ ಅಧಿಕ ಕಾಲ ಸಕ್ರಿಯ ರಾಗಿರುವುದರ ಜೊತೆಗೆ ಸಾಹಿತ್ಯಕೃಷಿಯಲ್ಲೂ ಮಹತ್ವದ ಸಾಧನೆ ಮಾಡಿದವರು.
1940ಜನವರಿ 12ರಂದು ಜನಿಸಿದ ಮಾರ್ಪಾಡಿ ವೀರಪ್ಪ ಮೊಯ್ಲಿ ಅವರ ತಂದೆ ತಮ್ಮಯ್ಯ ಮೊಯ್ಲಿ ಹಾಗೂ ತಾಯಿ ಪೂವಮ್ಮ. ತಮ್ಮ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣವನ್ನು ಮೂಡಬಿದರೆಯಲ್ಲಿ ಪೂರ್ಣಗೊಳಿಸಿ, ಮಂಗಳೂರಿನ ಸರಕಾರಿ ಕಾಲೇಜಿನಿಂದ ಪದವಿ ಪಡೆದರು. ಮೀನುಗಾರಿಕೆ ಇಲಾಖೆ, ಬಳಿಕ ಎಲ್ಐಸಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗಲೇ ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು.
ಕಾರ್ಕಳ ಹಾಗು ಮಂಗಳೂರಿನಲ್ಲಿ ವಕೀಲಿ ವೃತ್ತಿಯನ್ನಾರಂಭಿಸಿದ ಮೊಯ್ಲಿ ನಂತರ ಬೆಂಗಳೂರಿನ ಹೈಕೋರ್ಟ್ನಲ್ಲಿ ನ್ಯಾಯವಾದಿಗಳಾದರು. 1968ರಲ್ಲಿ ಮೊಯ್ಲಿ ರಾಜಕೀಯ ಪ್ರವೇಶಿಸಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. 1969ರಲ್ಲಿ ಕಿಸಾನ್ ಸಭಾ ಸ್ಥಾಪಿಸಿದರು. 1972ರಿಂದ 1999ರವರೆಗೆ ಮೊಯ್ಲಿ, ಕಾರ್ಕಳದ ಶಾಸಕರಾಗಿ ಆಯ್ಕೆಯಾದರು. 1974ರಿಂದ 1977 ರವರೆಗೆ ಸಣ್ಣ ಕೈಗಾರಿಕಾ ಸಚಿವರಾಗಿ 1980ರಿಂದ 1982ರವರೆಗೆ ಹಣಕಾಸು ಮತ್ತು ಯೋಜನಾ ಖಾತೆ ಸಚಿವರಾದರು. 1989ರಿಂದ 1992ರವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯ್ಲಿ, 1992ರಿಂದ 1994ರವರೆಗೆ ಕರ್ನಾಟಕದ 13ನೇ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದರು. 2009ರ ಬಳಿಕ ಅವರು ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಸಂಸತ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು.