ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮಾತೃಭಾಷಾ ಶಿಕ್ಷಣಕ್ಕೆ ಆದ್ಯತೆ: ಡಾ.ವೇಣುಗೋಪಾಲ್
ಉಡುಪಿ: ಮಾತೃಭಾಷೆಯಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣ ನೀಡಬೇಕೆನ್ನುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಆದ್ಯತೆ ಯಾಗಿದೆ. ಸ್ಥಳೀಯ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಭಾಷೆಗಳ ನಡುವೆ ರಾಷ್ಟ್ರೀಯ ಭಾಷೆಗೆ ಪೆಟ್ಟು ಬೀಳುತ್ತಿದೆ ಎಂದು ಬೆಂಗಳೂರು ವಿವಿ ನಿವೃತ್ತ ಕುಲಪತಿ ಡಾ.ವೇಣು ಗೋಪಾಲ್ ಕೆ.ಆರ್. ಹೇಳಿದ್ದಾರೆ.
ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ವತಿಯಿಂದ ಉಡುಪಿ ಕಿದಿಯೂರು ಹೋಟೆಲಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸ ಲಾದ ಶಿಕ್ಷಣ ತಜ್ಞರ ವಿಶೇಷ ಸಭೆ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜ್ಞಾನ ಸಂಪಾದನೆ, ಕೌಶಲ್ಯ ಹೆಚ್ಚಳದಿಂದ ಮಾತ್ರ ಉದ್ಯೋಗ ಪಡೆಯ ಬಹುದು ಮತ್ತು ಸಾಧನೆ ಮಾಡಬಹುದಾಗಿದೆ. ಶಿಕ್ಷಕರು ಮೊದಲು ಬದಲಾಗಬೇಕು. ಆಗ ಮಾತ್ರ ಶಿಕ್ಷಣ ನೀತಿಯಿಂದ ಬದಲಾವಣೆ ನಿರೀಕ್ಷಿಸ ಬಹುದಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದರು.
ಶಿಕ್ಷಕರಿಗೆ ಕಾಲಕಾಲಕ್ಕೆ ತರಬೇತಿ ಮುಖ್ಯ. ಐದು ವರ್ಷದೊಳಗೆ ಆನ್‌ಲೈನ್ ಕೋರ್ಸುಗಳಿಗೆ ಬೇಡಿಕೆ ಹೆಚ್ಚಾಗಲಿದೆ. ವಿಶ್ವದ ನಾನಾ ಭಾಷೆಗಳ ಕಲಿಕೆಗೆ ಕೃತಕ ಬುದ್ಧಿಮತ್ತೆ ಉತ್ತಮ ವೇದಿಕೆಯಾಗಲಿದ್ದು ಸಂವಹನ ಕೌಶಲ್ಯ, ಕೃತಕ ಬುದ್ದಿಮತ್ತೆಗೆ ರಾಷ್ಟ್ರೀಯ ನೂತನ ಶಿಕ್ಷಣ ನೀತಿಯಲ್ಲಿ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.
ಜ್ಞಾನ ಸುಧಾ ಸಂಸ್ಥೆ ಸ್ಥಾಪಕ ಡಾ.ಸುಧಾಕರ ಶೆಟ್ಟಿ, ಬಹರಗಾರ ಪ್ರದೀಪ್ ತುಮಕೂರು ಉಪಸ್ಥಿತರಿದ್ದರು. ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ಸಂಚಾಲಕ ಗೋಪಾಲಕೃಷ್ಣ ಭಟ್ ಎನ್.ಎಸ್. ಸ್ವಾಗತಿಸಿದರು. ಡಾ.ನಂದನ್ ಪ್ರಭು ಕಾರ್ಯಕ್ರಮ ನಿರೂಪಿಸಿದರು.